

ಮೈಸೂರು: ಮೂರು ನದಿಗಳ ಸಂಗಮ ಸ್ಥಾನ ತಿ.ನರಸೀಪುರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ 13ನೇ ಕುಂಭಮೇಳಕ್ಕೆ ಜನಸಾಗರವೇ ಹರಿದು ಬಂದಿದ್ದು, ಕುಂಭಮೇಳ ಯಶಸ್ವಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದ ಅವರು, ಕುಂಭಮೇಳ ಆಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿ ಅಗತ್ಯ ಅನುದಾನವನ್ನು ನೀಡಿದರು. ಜಿಲ್ಲಾಡಳಿತ ವ್ಯವಸ್ಥಿತವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿತು. ಸಾಧು ಸಂತರು ಅಗತ್ಯ ಮಾರ್ಗದರ್ಶನ ನೀಡಿದರು. ಎಲ್ಲರ ಪ್ರಯತ್ನದಿಂದ ಕುಂಭ ಮೇಳ ಯಶಸ್ವಿಯಾಗಿದೆ ಎಂದರು.
ಕುಂಭಮೇಳಕ್ಕೆ ಜನಸಾಗರವೇ ಹರಿದು ಬಂದು ಎಲ್ಲರು ಪುಣ್ಯ ಸ್ಥಾನ ಮಾಡುತ್ತಿದ್ದಾರೆ. 1989ರಲ್ಲಿ ಮೊದಲ ಕುಂಭಮೇಳ ನಡೆಯಿತು. ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುತ್ತದೆ. ಕೋವಿಡ್ ಸಂದರ್ಭದಲ್ಲಿ ಮಾತ್ರ ಒಮ್ಮೆ ನಡೆಯಲಿಲ್ಲ ಎಂದು ಮಾಹಿತಿ ನೀಡಿದರು.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಧಾರ್ಮಿಕ ಸಹಿಷ್ಣುತೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಆಚಾರ ವಿಚಾರಗಳ ಆಚರಣೆಗೆ ಮುಕ್ತವಾದ ಅವಕಾಶವನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ. ಸಂವಿಧಾನ ಎಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುತ್ತದೆ. ನಾವು ಭಾರತೀಯರು, ನಾವೆಲ್ಲರೂ ಒಂದೇ. ನಮ್ಮಲ್ಲಿ ಮೇಲು ಕೀಳು ಭಾವನೆ ಇಲ್ಲ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ನದಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ. ತಮ್ಮ ಮನೆಯ ಚರಂಡಿ, ಮನೆಯ ತ್ಯಾಜ್ಯ ನೀರನ್ನು ನದಿ
ಕಾಲುವೆಗಳಿಗೆ ಹರಿಯಲು ಬಿಡಬಾರದು. ನೀರು ರಾಷ್ಟ್ರದ ಸಂಪತ್ತು. ಇದನ್ನು ಉಳಿಸಿ ಬೆಳಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂಗಮ ಸ್ಥಳ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಪ್ರವಾಹ ಬಂದರೆ ಉಂಟಾಗಬಹುದಾದ ತೊಡಕು ನಿವಾರಣೆಗೆ ಗುಜರಾತ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದೆ. ಅದೇ ಮಾದರಿಯಲ್ಲಿ ದೇವಸ್ಥಾನದ ಬಳಿ ತಡೆ ಗೋಡೆ ನಿರ್ಮಿಸಿ ನೀರು ನುಗ್ಗದಂತೆ ನೋಡಿಕೊಳ್ಳಲಾಗಿದೆ ಎಂದರು.
ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಆಚರಣೆಯ ಜತೆಗೆ ನಾವು ಪ್ರಕೃತಿಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮನುಷ್ಯನ ನಾಗರೀಕತೆ ಆರಂಭವಾಗಿದ್ದು ನದಿಯ ದಡದಲ್ಲಿ. ಆದ್ದರಿಂದ ನಾವು ನದಿಗಳನ್ನು ಮತ್ತು ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮೂರು ದಿನಗಳ ಕುಂಭಮೇಳವು ಸುರಕ್ಷಿತವಾಗಿ ನಡೆದಿದೆ. ಧರ್ಮ ಮ್ತತು ಆಧ್ಯಾತ್ಮಿಕ ಪರಂಪರೆಯ ಭಾಗವಾಗಿ ಈ ಮೇಳ ಆಯೋಜಿಸಲಾಗಿದೆ. ಸಾಧಾರಣ ಮನುಷ್ಯನಾದರೆ ತನಗೆ, ತನ್ನ ಕುಟುಂಬಕ್ಕೆ ಒಳಿತಾಗಲಿ ಎಂದು ಬಯಸುತ್ತಾನೆ. ಆದರೆ ಗುರುಗಳು ಜಗತ್ತಿನ ಒಳಿತನ್ನು ನೋಡುತ್ತಾರೆ. ಹಾಗೆಯೇ ಆದಿಚುಂಚನಗಿರಿ ಮಠದ ದಿವಂಗತ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಅವರು ಈ ಕುಂಭಮೇಳ ಪರಂಪರೆಯನ್ನು ಆರಂಭಿಸಿದ್ದರಿಂದ ಇಷ್ಟೊಂದು ಚೆನ್ನಾಗಿ ನಡೆಯುತ್ತಿದೆ ಎಂದರು.
ಕೇವಲ ನೀರಿನಲ್ಲಿ ಮುಳುಗಿದರೆ ಮಾತ್ರ ಒಳ್ಳೆಯದು ಎಂಬುದಲ್ಲ, ಯಾವುದೇ ಫಲಾಪೇಕ್ಷೆ ಇಲ್ಲದೆ ಇಲ್ಲಿ ಮಾಡುತ್ತಿರುವ ಅನೇಕರ ಸೇವೆಯಿಂದಲೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಕಾವೇರಿ ದಕ್ಷಿಣದ ಗಂಗೆ. ಈ ಕ್ಷೇತ್ರ ಕಾಶಿ, ಪ್ರಯಾಗ್ ರಾಜ್‌ಗೆ ಸಮ. ನಮ್ಮ ಸಂಪ್ರದಾಯ ಸಂಸ್ಕೃತಿ, ಭಾರತೀಯತೆಯನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ಕೆಟ್ಟದಾರಿಗೆ ತಳ್ಳುವ ಶಕ್ತಿಗಳು ಹೆಚ್ಚಾಗಿವೆ. ಆ ರೀತಿಯಾಗಬಾರದು ಎಂದರೆ ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಬಿ.ಕೆ. ಲಕ್ಷ್ಮೀಜಿ, ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಮುಕ್ತಿದಾನಂದಜಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಇತರರು ಇದ್ದರು.
ಮೂರು ದಿನ ವಿವಿಧ ದೈವತಾ ಕಾರ್ಯ
ಮೂರು ದಿನಗಳ ಕಾಲ ತ್ರಿವೇಣಿ ಸಂಗಮದಲ್ಲಿ ವಿವಿಧ ದೈವತಾ ಕಾರ್ಯಗಳು ನಡೆಯಿತು. ಫೆ.10 ರಂದು ಮಾಘ ಶುದ್ಧ ತ್ರಯೋದಶಿ ಪುರ್ನವಸ್ಸು ನಕ್ಷತ್ರದಲ್ಲಿ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀರ್ವಾದ, ಅಗ್ರತೀರ್ಥಸಂಗ್ರಹಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮ ಇತ್ಯಾದಿಗಳು ಸಾಂಗೋಪವಾಗಿ ನಡೆಯಿತು. ಫೆ.11ರ ಮಾಘಶುದ್ಧ ಚತುರ್ದಶೀ ಪುಷ್ಯ ನಕ್ಷತ್ರದಂದು ಪುಣ್ಯಾಹ, ನವಗ್ರಹಪೂಜೆ, ಜಪ, ನವಗ್ರಹಹೋಮ, ಸುದರ್ಶನ ಪೂಜೆ, ಹೋಮ, ಪೂರ್ಣಾಹುತಿ ನೆರವೇರಿತು. ಫೆ.12 ರಂದು ಮಾಘಶುದ್ಧ ವ್ಯಾಸ ಪೂರ್ಣಿಮಾ - ಆಶ್ಲೇಷ ನಕ್ಷತ್ರದ ದಿನದಂದು ಪುಣ್ಯಾಹ, ಸಪ್ತನದೀತೀರ್ಥಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪ್ರಾತಃ 5 ರಿಂದ 11ರವರೆಗೆ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ ಮಾಡಲಾಯಿತು.
ಸಂಜೆವರೆಗೂ ಪುಣ್ಯಸ್ನಾನ
ಕುಂಭಸ್ನಾನಕ್ಕೆ ಬೆಳಗ್ಗೆ 11ರಿಂದ 11.30 ಮತ್ತು ಮಧ್ಯಾಹ್ನ 1.30 ರಿಂದ 2ಕ್ಕೆ ಮುಹೂರ್ತ ನಿಗದಿ ಪಡಿಸಲಾಗಿತ್ತು. ಆದರೆ, ಸಾಕಷ್ಟು ಭಕ್ತಾದಿಗಳಿಗೆ ಮುಹೂರ್ತದೊಳಗೆ ಪುಣ್ಯ ಸ್ನಾನ ಮಾಡಲು ಸಾಧ್ಯವಾಗಲಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಸಂಜೆವರೆಗೂ ಪುಣ್ಯಸ್ನಾನ ಮಾಡಿದರು.