ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ವೈಭವ: ಕಳೆಗಟ್ಟಿದ ಸಾತನೂರು ಕ್ಷೇತ್ರದ ದನಗಳ ಜಾತ್ರೆ

Narasimhaswamy-Rathotsava-in-Satanur-Village-mandya.
Published on

ಮಂಡ್ಯ: ತಾಲೂಕಿನ ಸಾತನೂರು ಗ್ರಾಮದ ಬೆಟ್ಟದಲ್ಲಿರುವ ಹಾಗೂ ನೂರಾರು ವರ್ಷದ ಇತಿಹಾಸ ಹೊಂದಿರುವ ಕಂಬದ ನರಸಿಂಹಸ್ವಾಮಿಯ ಮೂರನೇ ವರ್ಷದ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರೂ ಭಕ್ತರ ಜಯಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ನರಸಿಂಹಸ್ವಾಮಿಯ ಪಾದಕ್ಕೆ ನಮಿಸಿ ನಂತರ ಸ್ವಾಮಿಯ ದರ್ಶನ ಪಡೆದರು. ಇನ್ನು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಆಯೋಜಿಸಲಾಗಿತ್ತು. ದೇವರಿಗೆ ಅಲಂಕಾರ ಮಾಡಲಾಗಿತ್ತು. ಇತ್ತ ರಥವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ 12.05ರ ಅಭಿಜಿತ್ ಲಗ್ನದಲ್ಲಿ ಆದಿಚುಂಚನಗಿರಿ ಕೊಮ್ಮೇರಹಳ್ಳಿಯ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಮಂಡ್ಯ ಶಾಸಕ ರವಿಕುಮಾರ್ ಗಣಿಗ ರಥೋತ್ಸವಕ್ಕೆ ಚಾಲನೆ ನೀಡಿದರು.
ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಮಹೇಶ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ದೇವರ ದರ್ಶನ ಪಡೆದರು. ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಎಸ್.ಪಿ.ಮಹೇಶ್, ಶ್ರೀಕಾಂತ್, ಸತೀಶ್, ಲೋಹಿತ್, ಚಂದನ್, ನರಸಪ್ಪ, ರಾಜ್ ಇತರರಿದ್ದರು.

22ರವರೆಗೆ ದನಗಳ ಜಾತ್ರೆ: 3ನೇ ವರ್ಷದ ಬ್ರಹ್ಮರಥೋತ್ಸವ ಪ್ರಯುಕ್ತ ಆಯೋಜಿಸಿರುವ ಭಾರಿ ದನಗಳ ಜಾತ್ರೆ ಗಮನಸೆಳೆಯುತ್ತಿದೆ. ವಿವಿಧ ಗ್ರಾಮಗಳಿಂದ ಬಂದಿದ್ದ ಜೋಡೆತ್ತುಗಳಿಗಾಗಿ ಶಾಮಿಯಾನ ಸೇರಿದಂತೆ ನೆರಳಿಗೆ ವಿಶೇಷ ಶೆಡ್‌ಗಳನ್ನು ಮಾಡಿಕೊಳ್ಳಲಾಗಿದೆ. ಬೆಲೆ ಬಾಳುವ ರಾಸುಗಳು ಗಮನ ಸೆಳೆದವು. ಮೇ.22ರವರೆಗೆ ಜಾತ್ರೆ ನಡೆಯಲಿದ್ದು, ಐದು ವಿಭಾಗದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು. ಇನ್ನು ಜಾತ್ರೆಯಲ್ಲಿ ಗೃಹಪಯೋಗಿ ವಸ್ತುಗಳು ಸೇರಿದಂತೆ ಮಕ್ಕಳ ಆಟಿಕೆಯ ಸಾಮಗ್ರಿಗಳು ಹಾಗೂ ತಿನಿಸುಗಳ ಅಂಗಡಿಗಳು ಇದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net