

ಮೈಸೂರು: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಕುಂಭಮೇಳ ಬುಧವಾರ ಸುಸೂತ್ರವಾಗಿ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ಕುಂಭಮೇಳಕ್ಕೆ ಭಕ್ತಾದಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಹೋಪಾದಿಯಲ್ಲಿ ಹರಿದು ಬಂದರು.
ನಾಡಿನ ಜೀವನದಿ ಕಾವೇರಿ ಹಾಗೂ ಉಪ ನದಿಗಳಾದ ಕಪಿಲಾ ಹಾಗೂ ಸ್ಫಟಿಕ ಸಂಗಮವಾಗುವ ಸ್ಥಳದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ನಿರ್ಮಿಸಲಾಗಿದ್ದ ಸ್ನಾನಘಟ್ಟದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾದರು. ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲನಾನಂದನಾಥ ಸ್ವಾಮೀಜಿ, ಶ್ರೀ ಅವಧೂತ ದತ್ತಪೀಠದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ, ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಮುಕ್ತಿದಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.
ಸೋಮವಾರದಿಂದ ಬುಧವಾರದವರೆಗೆ ಭಕ್ತಾದಿಗಳು ತಂಡೋಪತಂಡವಾಗಿ ತಿ.ನರಸೀಪುರದತ್ತ ಆಗಮಿಸುತ್ತಲೇ ಇದ್ದರು. ಬುಧವಾರ ಕುಂಭಮೇಳದ ಕೊನೆಯ ದಿನ ಹಾಗೂ ಮಾಘ ಪೂರ್ಣಿಮೆ ಹಿನ್ನೆಲೆಯಲ್ಲಿ ಭಕ್ತಾದಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೀಗಾಗಿ ಭಕ್ತಾದಿಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಗಿತ್ತು. ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ತಿ.ನರಸೀಪುರ ಪಟ್ಟಣದಲ್ಲಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂತು. ಮೈಸೂರು-ತಿ.ನರಸೀಪುರ ಮಖ್ಯ ರಸ್ತೆಯ ರೈತರ ಹೊಲಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಉತ್ತರ ಭಾರತದ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದ್ದು, ಅಲ್ಲಿಗೆ ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದಾರೆ. ಸಾಕಷ್ಟು ಭಕ್ತಾದಿಗಳಿಗೆ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ. ಅಂತಹ ಸಾಕಷ್ಟು ಭಕ್ತಾದಿಗಳು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ತಿ.ನರಸೀಪುರಕ್ಕೆ ಆಗಮಿಸಿ ಪುಣ್ಯಸ್ನಾನ ಮಾಡುವ ಮೂಲಕ ಧನ್ಯತಾ ಭಾವದೊಂದಿಗೆ ಮರಳಿದರು. ಪುಣ್ಯ ಸ್ನಾನದ ಬಳಿಕ ಭಕ್ತಾದಿಗಳು ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ಅಗಸ್ತ್ಯೇಶ್ವರ ಹಾಗೂ ಭಿಕ್ಷೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಭಕ್ತಾದಿಗಳಿಗೆ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ಅಗಸ್ತ್ಯೇಶ್ವರ ಹಾಗೂ ಭಿಕ್ಷೇಶ್ವರಸ್ವಾಮಿ ದೇವಸ್ಥಾನ ಬಳಿಯಲ್ಲಿ ಸ್ನಾನಕ್ಕೆ ಸುರಕ್ಷಿತ ಜಾಗವನ್ನು ಗುರುತಿಸಲಾಗಿತ್ತು. ಅಲ್ಲದೆ, ಗುರುತಿಸಿದ ಜಾಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭಕ್ತಾದಿಗಳು ನದಿಯ ಆಳದ ಪ್ರದೇಶಕ್ಕೆ ತೆರಳದಂತೆ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ಬುಧವಾರ ಭಕ್ತಾದಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪುಣ್ಯಸ್ನಾನ ಮಾಡುವ ಜಾಗದಲ್ಲಿ ನೂಕು ನುಗ್ಗಲು ಉಂಟಾಯಿತು. ಈ ಹಿನ್ನೆಲೆಯಲ್ಲಿ ಸುರಕ್ಷತೆಗೆ ಅಳವಡಿಸಿದ್ದ ಕೆಲವು ಬ್ಯಾರಿಕೇಡ್‌ಗಳು ಚದುರಿ ಹೋಯಿತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್ ಸಿಬ್ಬಂದಿ ಭಕ್ತಾದಿಗಳು ಅಪಾಯದ ಸ್ಥಳದಿಂದ ಹೊರಗೆ ಕಳುಹಿಸಿ ಮತ್ತೆ ಬ್ಯಾರಿಕೇಡ್‌ಗಳನ್ನು ಅಳವಡಿಸಿದರು. ನಿಗದಿ ಪಡಿಸಿದ ಆಳವಿಲ್ಲದ ಸುರಕ್ಷಿತ ಜಾಗದಲ್ಲಿ ಸಾಕಷ್ಟು ಹೊತ್ತು ಕಾಯ್ದರೂ ಪುಣ್ಯಸ್ನಾನ ಮಾಡಲು ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಭಕ್ತಾದಿಗಳು ದೇವಸ್ಥಾನದ ಆಸುಪಾಸಿನಲ್ಲಿ ಅಸುರಕ್ಷಿತ ಪ್ರದೇಶದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದ ದೃಶ್ಯಗಳು ಕಂಡು ಬಂತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಒಮ್ಮಿಂದೊಮ್ಮೆಲೆ ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೂ ಸಹ ಎಲ್ಲ ಭಕ್ತಾದಿಗಳನ್ನು ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪಿರಮಿಡ್ ನಿರ್ಮಾಣ: ಸಾಕಷ್ಟು ಭಕ್ತಾದಿಗಳಿಗೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಪುಣ್ಯದ ಕ್ಷಣವಾಗಿತ್ತು. ಆದರೆ, ಕೆಲವರಿಗೆ ಇದು ಮೋಜಿನ ತಾಣವಾಗಿತ್ತು. ಕೆಲವು ಯುವಕರು ನದಿಯಲ್ಲಿ ಸ್ನಾನ ಮಾಡಿ ಬೇರೆ ಭಕ್ತಾದಿಗಳಿಗೆ ಪುಣ್ಯ ಸ್ನಾನ ಮಾಡಲು ಅವಕಾಶ ನೀಡದೆ ಈಜಾಡುತ್ತಾ ಕಾಲ ಕಳೆಯುತ್ತಿದ್ದ ದೃಶ್ಯ ಕಂಡು ಬಂತು. ಕೆಲವು ಯುವಕರು ನದಿಯಲ್ಲಿ ಪಿರಮಿಡ್ ನಿರ್ಮಾಣ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸರು ಯುವಕರಿಗೆ ಎಚ್ಚರಿಕೆ ನೀಡಿ ಬೇರೆಯವರೆಗೆ ಪುಣ್ಯ ಸ್ನಾನಕ್ಕೆ ಅವಕಾಶವಾಗುವಂತೆ ಮಾಡಿಕೊಟ್ಟರು.
ಪುಣ್ಯಸ್ನಾನ ಮಾಡಿದ ಬಂದ ಭಕ್ತಾದಿಗಳಿಗೆ ತ್ರಿವೇಣಿ ಸಂಗಮದ ಸುತ್ತಮುತ್ತ ವಿವಿಧೆಡೆ ಮಧ್ಯಾಹ್ನ ಪ್ರಸಾದ ವಿತರಣೆ ಮಾಡಲಾ ಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು. ಪ್ರಸಾದ ವಿತರಣೆಯ ಜಾಗದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಹೀಗಾಗಿ ಪ್ರಸಾದ ಸ್ವೀಕರಿಸಲು ಭಕ್ತಾದಿಗಳು ಗಂಟೆ ಗಟ್ಟಲೇ ಕಾಯುವ ಪರಿಸ್ಥಿತಿ ಇತ್ತು. ಭಕ್ತಾದಿಗಳು ಸಾಕಷ್ಟು ಹೊತ್ತು ತಾಳ್ಮೆಯಿಂದ ಕಾಯ್ದು ಪ್ರಸಾದ ಸ್ವೀಕರಿಸಿದರು.
ಕಾಣೆಯಾದ ಮಕ್ಕಳು: ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ವಯೋವೃದ್ಧರು ಸಾಕಷ್ಟು ಸಮಸ್ಯೆ ಎದುರಿಸುವ ಂತಾ ಯಿತು. ಉರಿ ಬಿಸಿಲು, ಧೂಳು ತುಂಬಿದ ವಾತಾವರಣದಲ್ಲಿ ನಡೆಯುವಾಗ ಜನರು ಸಮಸ್ಯೆ ಎದುರಿಸಿದರು. ಕೆಲವು ಮಕ್ಕಳು ಗುಂಪಿನ ನಡುವೆ ಕಾಣೆಯಾಗಿ ನಂತರ ಪಾಲಕರ ಬಳಿ ಸುರಕ್ಷಿತವಾಗಿ ಸೇರಿದರು. ಕಾಣೆಯಾದ ಮಕ್ಕಳ ವಿವರವನ್ನು ಪೊಲೀಸರು ಮೈಕ್ ಮೂಲಕ ತಿಳಿಸಿ ಮಕ್ಕಳನ್ನು ಪಾಲಕರ ಬಳಿ ಸೇರಿಸುತ್ತಿದ್ದರು.
ಬಿಗಿ ಬಂದೋಬಸ್ತ್: ಕುಂಭ ಮೇಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜನದಟ್ಟಣೆ ಇರುವ ರಸ್ತೆ, ದೇವಸ್ಥಾನ, ಪುಣ್ಯ ಸ್ನಾನ ಮಾಡುವ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಭಕ್ತಾದಿಗಳು ತೆರಳಬೇಕಾಗಿರುವ ಮಾರ್ಗದ ಕುರಿತು ಪೊಲೀಸರು ಮಾರ್ಗದರ್ಶನ ನೀಡುತ್ತಿದ್ದರು. ಪುಣ್ಯ ಸ್ನಾನ ಮಾಡುವ ಜಾಗದಲ್ಲಿ ಯಾವುದೇ ರೀತಿಯ ಅಪಾಯ ಸಂಭವಿಸಿಸಬಾರದು ಎಂಬ ಉದ್ದೇಶದಿಂದ ಮುಳುಗುತಜ್ಞರನ್ನು ನಿಯೋಜಿಸಲಾಗಿತ್ತು.
ತಿ.ನರಸೀಪುರ ಕುಂಭ ಮೇಳದ ಅಂತಿಮ ದಿನವಾದ ಬುಧವಾರ 2.50 ಲಕ್ಷ ಭಕ್ತಾದಿಗಳು ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಕುಂಭಮೇಳದ ಅಂತಿಮ ದಿನ ಹಾಗೂ ಮಾಘ ಪೂರ್ಣಿಮೆ ಹಿನ್ನೆಲೆಯಲ್ಲಿ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದಾರೆ.
ರಕ್ಷಿತ್, ಕುಂಭಮೇಳ ನೋಡಲ್ ಅಧಿಕಾರಿ