ನರಸಿಂಹ ದೇವರ ಅವಭೃತೋತ್ಸವ ಸಂಪನ್ನ: ಅಗ್ರಹಾರದ ಪುಣ್ಯತೀರ್ಥದಲ್ಲಿ ಶ್ರೀಗಳಿಂದ ದೇವರಿಗೆ ಜಲಾಭಿಷೇಕ

kattepooje
ಶ್ರೀ ನರಸಿಂಹ ಜಯಂತಿ ಮಹೋತ್ಸವದ ಅಂಗವಾಗಿ ಶನಿವಾರ ಕುಮಾರಧಾರ ನದಿಯ ಅಗ್ರಹಾರ ತೀರ್ಥದಲ್ಲಿ ನಡೆದ ಅವಭೃತೋತ್ಸವದ ಬಳಿಕ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಶ್ರೀನೃಸಿಂಹ ದೇವರಿಗೆ ಕಟ್ಟೆಪೂಜೆ ನೆರವೇರಿಸಿದರು.
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತಿ ಮಹೋತ್ಸವದ ಅಂಗವಾಗಿ ಕುಮಾರಧಾರ ನದಿಯ ಅಗ್ರಹಾರದ ಪಂಚಮಿ ತೀರ್ಥದಲ್ಲಿ ದೇವರ ಅವಭೃತೋತ್ಸವ ಸುಸಂಪನ್ನಗೊಂಡಿತು.

ಶನಿವಾರ ಪುಣ್ಯನದಿ ಕುಮಾರಧಾರದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವಭೃತದ ವಿದಿವಿಧಾನ ನೆರವೇರಿಸಿದರು. ಪ್ರಧಾನ ಅರ್ಚಕ ಶ್ರೀಕರ ಉಪಾಧ್ಯಾಯ ಉತ್ಸವದ ವೈಧಿಕ ವಿದಾನ ನೆರವೇರಿಸಿದರು.

ಶಂಖಾಭಿಷೇಕ

ಶನಿವಾರ ಪ್ರಾತಃಕಾಲ ಶ್ರೀ ನರಸಿಂಹ ದೇವರಿಗೆ ಕಟ್ಟೆಪೂಜೆ ನಡೆಯಿತು. ನಂತರ ಓಕುಳಿ ಪೂಜೆ ಹಾಗೂ ಓಕುಳಿ ಸಂಪ್ರೋಕ್ಷಣೆ. ಬಳಿಕ ಭಕ್ತರಿಗೆ ಓಕುಳಿ ವಿತರಣೆಯಾಯಿತು. ನಂತರ ದೇವರು ಬಂಡಿ ರಥದಲ್ಲಿ ದೇವಳದಿಂದ ಅಗ್ರಹಾರ ಸೋಮನಾಥ ದೇವಾಲಯದ ಸಮೀಪದ ಕುಮಾರಧಾರ ನದಿ ತಟದವರೆಗೆ ಸಾಗಿಬಂದರು. ಅಗ್ರಹಾರದ ಪುಣ್ಯತೀರ್ಥದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥರು ದೇವರಿಗೆ ಜಲಾಭಿಷೇಕ ಮತ್ತು ಶಂಖಾಭಿಷೇಕ ನೆರವೇರಿಸಿದರು. ಅಲ್ಲದೆ ಸೀಯಾಳಾಭಿಷೇಕ ನಡೆಯಿತು. ನಂತರ ದೇವರ ಅವಭೃತ ಸ್ನಾನ ನೆರವೇರಿತು.

ದೇವರಿಗೆ ಕಟ್ಟೆಪೂಜೆ

ಭಕ್ತರು ದೇವರೊಂದಿಗೆ ಅವಭೃತ ಸ್ನಾನ ಮಾಡಿದರು. ಆ ಬಳಿಕ ಕಟ್ಟೆಯಲ್ಲಿ ದೇವರಿಗೆ ಕಟ್ಟೆಪೂಜೆ ನೆರವೇರಿತು. ದೇವರ ಅವಭೃತೋತ್ಸವದ ಬಳಿಕ ಮಠಕ್ಕೆ ಆಗಮಿಸುವಾಗ ಅಗ್ರಹಾರದಿಂದ ದೇವಳದವರೆಗೆ ಅಂಗಡಿ ವ್ಯಾಪಾರಸ್ಥರು ಅಲ್ಲದೇ ಮನೆಯವರು ಫಲ ಪುಷ್ಫ ಹಾಗೂ ಆರತಿ ನೀಡಿ ದೇವರಿಗೆ ಸೇವೆ ಸಲ್ಲಿಸಿದರು. ಅವಭೃತ ಮುಗಿಸಿ ಮಠಕ್ಕೆ ಆಗಮಿಸಿದ ನೃಸಿಂಹ ದೇವರಿಗೆ ಮಠದಲ್ಲಿ ವಸಂತಪೂಜೆ ನೆರವೇರಿತು. ಬಳಿಕ ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿದರು. ಮಠದ ದಿವಾನ ಸುದರ್ಶನ ಜೋಯೀಸ್, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net