

ನರಗುಂದ: ಸಿ.ಸಿ. ಪಾಟೀಲ ಅವರು ಶಾಸಕರಾಗಿ ಕೇವಲ ಜನಪ್ರತಿನಿಧಿ ಆಗಿರಬಹುದಷ್ಟೇ. ಆದರೆ, ನರಗುಂದ ತಾಲೂಕು ಅನ್ನು ನಿಮಗೆ ಗುತ್ತಿಗೆ ಕೊಟ್ಟಿಲ್ಲ. ನಿಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಕಾಮಗಾರಿಗಳಿಗೆ ಜನರು ಛೀಮಾರಿ ಹಾಕುತ್ತಿದ್ದಾರೆ. ಸರ್ವಾಧಿಕಾರದ ಮನೋಪ್ರವೃತ್ತಿ ಕೈಬಿಡಬೇಕು ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಹರಿಹಾಯ್ದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಸಿ. ಪಾಟೀಲ 2023ರ ಚುನಾವಣೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ನಮ್ಮ ಪಕ್ಷದ ಕೆಲ ಮುಖಂಡರನ್ನು ಬುಕ್ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಳಪೆ ಕಾಮಗಾರಿಗಳ ತನಿಖೆ ಮಾಡಿಸುವ ಭರವಸೆ ನೀಡಿದ್ದೆ. ಅದರಂತೆ ಕ್ಷೇತ್ರದಲ್ಲಿ ನಡೆದಿರುವ 500 ಕೋಟಿ ರೂಪಾಯಿಗೂ ಅಧಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ತನಿಖೆ ನಡೆಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇನೆ. ಹೀಗಾಗಿ ಶಾಸಕ ಸಿ.ಸಿ. ಪಾಟೀಲ ಅವರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಗುತ್ತಿಗೆದಾರರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ ಎಂದರು.
ಚುನಾವಣೆಯಲ್ಲಿ ನನಗೆ 71 ಸಾವಿರಕ್ಕೂ ಅಧಿಕ ಜನರು ಮತ ಹಾಕಿದ್ದಾರೆ. ಸಿ.ಸಿ. ಪಾಟೀಲ ಅವರು ನನಗಿಂತ ಕೇವಲ 1 ಸಾವಿರಕ್ಕೂ ಹೆಚ್ಚಿನ ಮತಗಳನ್ನು ಪಡೆದು ಶಾಸಕರಾಗಿರಬಹುದು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಜಿ ಶಾಸಕನಾಗಿ ನನಗೂ ಮಹತ್ತರವಾದ ಜವಾಬ್ದಾರಿ, ಸ್ಥಾನಮಾನಗಳಿವೆ. ಪಟ್ಟಣದಲ್ಲಿರುವ ಇಂಜಿನಿಯರಿಂಗ್ ಕಾಲೇಜ್ ಸರ್ಕಾರದ್ದು. ಅದನ್ನು ನಾನು ನಿರ್ವಿುಸಿಕೊಟ್ಟಿದ್ದೇನೆ. ಆದರೆ, ದುರ್ದೈವ 10 ವರ್ಷವಾದರೂ ಸಿ.ಸಿ. ಪಾಟೀಲ ಅವರಿಂದ ಕಾಲೇಜ್ಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಕೊಡಲು ಇದುವರೆಗೆ ಸಾಧ್ಯವಾಗಿಲ್ಲ ಎಂದರು.
ಇತ್ತೀಚೆಗೆ ಇಂಜಿನಿಯರಿಂಗ್ ಕಾಲೇಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ತಕ್ಷಣ ಮೂಲಸೌಕರ್ಯ ಕಲ್ಪಿಸಿ ಕಾಲೇಜ್ ಕೋರ್ಸ್ಗಳನ್ನು ಪ್ರಾರಂಭಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ನಿಮ್ಮಂತೆ ಯಾವುದೇ ಅಧಿಕಾರಿಗಳನ್ನು ಹೆದರಿಸಿ, ಬೆದರಿಸುವ ಕ್ಷುಲ್ಲಕ ರಾಜಕಾರಣ ಮಾಡಿಲ್ಲ ಎಂದು ಸಿ.ಸಿ.ಪಾಟೀಲ ಆರೋಪಕ್ಕೆ ಪ್ರತ್ತ್ಯುತ್ತರ ನೀಡಿದರು.
ಬಾಬು ಹಿರೇಹೊಳಿ, ವಿಠ್ಠಲ ಶಿಂಧೆ, ಎಂ.ಬಿ. ಅರಹುಣಸಿ, ಪ್ರವೀಣ ಯಾವಗಲ್ಲ, ರಾಜು ಕಲಾಲ, ಡಿ.ಜಿ. ಚೌಡರಡ್ಡಿ, ಟಿ.ಬಿ. ಶಿರಿಯಪ್ಪಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಐ.ಪಿ. ಚಂದೂನವರ, ಪ್ರಕಾಶ ಹಡಗಲಿ, ನೀಲಪ್ಪ ಗುಡದನ್ನವರ, ಬಸುರೆಡ್ಡಿ ಹಂಚಿನಾಳ, ಬಿ.ಐ. ಕಡಕೋಡ, ಎಸ್.ಕೆ.ದಂಡಾಪೂರ, ಎಚ್.ಎಂ. ಪಾಣಿಗಟ್ಟಿ, ಹನುಮಂತಪ್ಪ ಶಿಂಧೆ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಶಾಸಕ ಸಿ.ಸಿ. ಪಾಟೀಲ ಕಾಂಗ್ರೆಸ್ಗೆ ಸೇರುವುದು ಒಳಿತು ಎಂದೆನಿಸುತ್ತದೆ. ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಹಿರಿಯರು, ಕಾರ್ಯಕರ್ತರು, ಮುಖಂಡರನ್ನು ಜಿಲ್ಲಾ ಮಟ್ಟದಲ್ಲಿ ಕಡೆಗಣಿಸಲಾಗುತ್ತಿದೆ. ನಾನು ಹೋರಾಟದಿಂದ ಹಲವಾರು ಏಳುಬೀಳು, ಸವಾಲುಗಳನ್ನು ಎದುರಿಸಿ ನರಗುಂದ ಮತಕ್ಷೇತ್ರಕ್ಕೆ ಬಂದಿದ್ದೇನೆ. ಈ ಬಗ್ಗೆ ನಮ್ಮ ಪಕ್ಷದ ಹಿರಿಯ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನನ್ನ ಸೋಲಿಗೆ ಕಾರಣರಾದವರನ್ನು ಕೆಲವೊಂದು ಮಹತ್ವದ ಕಾರ್ಯಕ್ರಮಗಳಲ್ಲಿ ಎಡಬಲ ಕರೆದುಕೊಂಡು ತಿರುಗಾಡುತ್ತಿರುವುದು ಬೇಸರ ತರಿಸಿದೆ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರ ವಿರುದ್ಧ ಬಿ.ಆರ್. ಯಾವಗಲ್ಲ ಅಸಮಾಧಾನ ವ್ಯಕ್ತಪಡಿಸಿದರು