

ನರಗುಂದ: ವಿದ್ಯಾರ್ಥಿಗಳ ಜೀವನ ಹೂವಿನ ಹಾಸಿಗೆ ಇದ್ದ ಹಾಗೆ. ಕೋಮಲ ಮನಸಿನ ಮಕ್ಕಳು ವಿದ್ಯೆಯತ್ತ ಹೆಚ್ಚಿನ ಗಮನ ಹರಿಸಬೇಕು. ಯಾವೊಬ್ಬ ವಿದ್ಯಾರ್ಥಿಯೂ ದುಶ್ಚಟಗಳ ದಾಸರಾಗದೆ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಸಿಪಿಐ ಮಂಜುನಾಥ ನಡುವಿನಮನಿ ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಕುರಿತ ಘಟನೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಪ್ರಾಚಾರ್ಯ ಎಸ್.ಕೆ. ಜೋಶಿ ಮಾತನಾಡಿದರು. ಎಚ್.ಎನ್. ಶಿವಪ್ಪಯ್ಯನಮಠ, ಕೆ.ಎಂ. ಮಾಕನ್ನವರ, ಬಿ.ಎಫ್. ಕರಿಗಾರ, ರಿಯಾಜ್ ಜೂಲಿಕಟ್ಟಿ, ಅಶ್ವಿಜಾ ವಾಸನ, ಇತರರಿದ್ದರು. ಎಂ.ಎಸ್. ಚವ್ಹಾಣ ಕಾರ್ಯಕ್ರಮ ನಿರ್ವಹಿಸಿದರು.