

ನರಗುಂದ: ಬೇರೆ ಬೇರೆ ಕಡೆಯಿಂದ ಕರ್ತವ್ಯ ನಿಮಿತ್ತ ಪಟ್ಟಣಕ್ಕೆ ಆಗಮಿಸುವ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರವಾಸಿಗರು, ಜನಪ್ರತಿನಿಧಿಗಳಿಗೆ ನಿಗದಿತ ಸಮಯದಲ್ಲಿ ವಿಶ್ರಾಂತಿ, ವಾಸ್ತವ್ಯ ದೊರಕಿಸಿಕೊಡುವ ಸದುದ್ದೇಶದಿಂದ ಪಟ್ಟಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 2 ವರ್ಷದ ಹಿಂದೆ ಪರಿವೀಕ್ಷಣಾ ಮಂದಿರ (ಐಬಿ) ನಿರ್ಮಾಣವಾಗಿದ್ದರೂ, ಅಗತ್ಯ ಪೀಠೋಪಕರಣಗಳಿಲ್ಲದೆ ಅನಾಥವಾಗಿದೆ.
ಪಟ್ಟಣದಲ್ಲಿದ್ದ ನೀರಾವರಿ ಇಲಾಖೆ ಹಳೇ ಪರಿವೀಕ್ಷಣಾ ಮಂದಿರ ಶಿಥಿಲಗೊಂಡಿದ್ದರಿಂದ 2019 ರಲ್ಲಿ 1.35 ಕೋಟಿ ರೂಪಾಯಿ ವೆಚ್ಚದ ನೂತನ ಪರಿವೀಕ್ಷಣಾ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಕಾರಣಾಂತರಗಳಿಂದ 2020ರಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭಗೊಂಡು 2022ರಲ್ಲಿ ಪೂರ್ಣಗೊಂಡಿದ್ದರಿಂದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಬಿ ಹಾಗೂ ನೀರಾವರಿ ಇಲಾಖೆ ವಸತಿ ಸಮುಚ್ಚಯ ಉದ್ಘಾಟಿಸಿದ್ದರು.
ಆದರೆ, ಕಳಪೆ ಕಾಮಗಾರಿಯಿಂದ ಇಲ್ಲಿನ ಪ್ರವಾಸಿ ಮಂದಿರದ ಗೋಡೆ, ನೆಲಹಾಸು ಸಂಪೂರ್ಣ ಬಿರುಕು ಬಿಟ್ಟಿದ್ದವು. ಮಳೆಯಿಂದ ಕಾಂಕ್ರೀಟ್ ಮೇಲ್ಛಾವಣೆಯೂ ಸೋರುತ್ತಿತ್ತು. ಸರಿಯಾಗಿ ಪ್ಲಂಬಿಂಗ್, ಕಟ್ಟಿಗೆಯ ಬಾಗಿಲುಗಳನ್ನು ಅಳವಡಿಸಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಟ್ಟಡದ ಕಾಮಗಾರಿ ಪರಿಶೀಲಿಸಿದ್ದ ಶಾಸಕ ಸಿ.ಸಿ.ಪಾಟೀಲ ಅವರು ಪ್ರತಿಯೊಂದು ಕಾಮಗಾರಿಗಳ ದುರಸ್ತಿಪಡಿಸಿ, ಗುಣಮಟ್ಟದ ಪಿಠೋಪಕರಣ ಅಳವಡಿಸಿಕೊಡುವಂತೆ ಗುತ್ತಿಗೆದಾರ, ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಆದರೆ, ಹೊಸ ಕಟ್ಟಡ ನಿರ್ಮಾಣಕ್ಕೆ ತೆಗೆದುಕೊಂಡಷ್ಟು ಸಮಯ ಸಣ್ಣಪುಟ್ಟ ದುರಸ್ತಿಗಳಿಗೂ 2 ವರ್ಷ ತೆಗೆದುಕೊಳ್ಳಲಾಯಿತು. ಈಗ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಅಗತ್ಯ ಪಿಠೋಪಕರಣಗಳ ವ್ಯವಸ್ಥೆ ಒದಗಿಸಿಲ್ಲ.
ಅನುದಾನಕ್ಕೆ ಮನವಿ:
ಪಟ್ಟಣದಲ್ಲಿರುವ ನೀರಾವರಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಫರ್ನಿಚರ್, ಬೆಡ್, ಕುರ್ಚಿ ಮುಂತಾದ ಪೀಠೋಪಕರಣಗಳ ವ್ಯವಸ್ಥೆ ಕಲ್ಪಿಸಿಕೊಡಲು ಶಾಸಕ ಸಿ.ಸಿ. ಪಾಟೀಲ 50 ಲಕ್ಷ ರೂಪಾಯಿ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ, ಸರ್ಕಾರ ಬದಲಾಗಿದ್ದರಿಂದ ಅನುದಾನವಿಲ್ಲದೆ ವಿಳಂಬವಾಯಿತು. ಶಾಸಕ ಸಿ.ಸಿ.ಪಾಟೀಲ, ಕಾಂಗ್ರೆಸ್‌ನ ಮಾಜಿ ಶಾಸಕ ಬಿ.ಆರ್.ಯಾವಗಲ್ ಇಬ್ಬರೂ ಇಲ್ಲಿನ ಪ್ರವಾಸಿ ಮಂದಿರದ ಫರ್ನಿಚರ್ ಕೆಲಸಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಈವರೆಗೆ ಬಾಕಿ ಕಾಮಗಾರಿ ಪ್ರಾರಂಭಗೊಂಡಿಲ್ಲ.
ನೀರಾವರಿ ಇಲಾಖೆ ನೂತನ ಪರಿವೀಕ್ಷಣಾ ಮಂದಿರದಲ್ಲಿ ಪೀಠೋಪಕರಣಗಳ ಅಳವಡಿಕೆಗೆ ಈಗಾಗಲೇ 50 ಲಕ್ಷ ರೂಪಾಯಿ ವೆಚ್ಚದ ಟೆಂಡರ್ ಕರೆಯಲಾಗಿದೆ. ಫರ್ನಿಚರ್ ಕೆಲಸವಾದ ತಕ್ಷಣ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಮತ್ತು ವಾಸ್ತವ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗುವುದು. ಜಗದೀಶ ಕುರಿ. ಕಾರ್ಯನಿರ್ವಾಹಕ ಇಂಜಿನಿಯರ್ ನರಗುಂದ