ನರಗುಂದ ಜಿಟಿಟಿಸಿ ಪ್ರವೇಶಕ್ಕೆ ನೂರೆಂಟು ವಿಘ್ನ

06 NRD
Published on

ನರಗುಂದ: ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಜತೆಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಉದ್ದೇಶದೊಂದಿಗೆ ಪಟ್ಟಣದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಕಾಲೇಜ್ ನಿರ್ಮಿಸಲಾಗಿದೆ. ಆದರೆ, ಈ ಕಾಲೇಜ್ ಉದ್ಘಾಟನೆಗೊಂಡು ವರ್ಷ ಕಳೆದರೂ ಮೂಲಸೌಕರ್ಯಗಳಿಲ್ಲ. ಸೌಕರ್ಯಗಳ ಕೊರತೆಯಿಂದಾಗಿ ತರಗತಿಗಳು ಪ್ರಾರಂಭಗೊಂಡಿಲ್ಲ.

ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಬೇಕು. ಜಾಗತಿಕ ಗುಣಮಟ್ಟಕ್ಕೆ ಹೆಚ್ಚಿನ ಒಲವು ನೀಡಬೇಕು ಎಂಬ ಏಕೈಕ ಉದ್ದೇಶದಿಂದ 38 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಅಳಗವಾಡಿ ರಸ್ತೆಯ 5 ಎಕರೆ ಜಮೀನಿನ ಪೈಕಿ 2 ಎಕರೆಯಲ್ಲಿ ಸರ್ಕಾರಿ ಉಪಕರಣಾಗಾರದ ಕಾಲೇಜ್ ನಿರ್ಮಿಸಲಾಗಿದೆ. ಹಾಲಿ ಹಾಗೂ ಮಾಜಿ ಶಾಸಕರ ರಾಜಕೀಯ ಪ್ರಹಸನಗಳ ನಂತರ ಮಾರ್ಚ್‌ನಲ್ಲಿಯೇ ಕಾಲೇಜ್ ಉದ್ಘಾಟನೆಗೊಂಡಿದೆ. ಆದರೆ, ಇನ್ನುಳಿದ ಮೂರು ಎಕರೆ ಪ್ರದೇಶದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ವಸತಿನಿಲಯ, ಟ್ರೇನಿಂಗ್ ಬ್ಲಾಕ್, ಕಾಂಪೌಂಡ್, ಪ್ರಾಚಾರ್ಯರು, ಸಿಬ್ಬಂದಿಯ ವಸತಿಗೃಹ, ಕುಡಿಯುವ ನೀರು, ಕ್ಯಾಂಟೀನ್, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗಳು ಬಾಕಿ ಉಳಿದಿವೆ.

ಕಾಲೇಜ್ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಕೊರೆಯಿಸಿದ್ದ ಬೊರ್‌ವೆಲ್ ಕೆಟ್ಟು ನಿಂತಿದೆ. ನರಗುಂದದಿಂದ 2 ಕಿ.ಮೀ ದೂರದಲ್ಲಿರುವ ಕಾಲೇಜ್‌ಗೆ ಒಂದುವರೆ ಕಿಲೋ ಮೀಟರ್ ಉದ್ದದ ವರೆಗೆ ಪ್ರತ್ಯೇಕ ಕುಡಿಯುವ ನೀರಿನ ಪೈಪ್‌ಲೈನ್ ಜೋಡಣೆ ಕಾಮಗಾರಿ ಬಾಕಿಯಿದೆ. ಈ ಹಿನ್ನೆಲೆಯಲ್ಲಿ 2023ರ ಜೂನ್‌ನಿಂದಲೇ ಪ್ರಾರಂಭಗೊಳ್ಳಬೇಕಿದ್ದ ಕಾಲೇಜ್‌ನ ಯಾವುದೇ ಕೋರ್ಸ್‌ಗಳು ಇದುವರೆಗೆ ಆರಂಭಗೊಂಡಿಲ್ಲ. ವರ್ಕಶಾಪ್‌ಗೆ ಟೂಲ್ಸ್ ಕಿಟ್ ಕೂಡ ಬಂದಿಲ್ಲ. ಪರಿಣಾಮ ಸ್ವಂತ ಉದ್ಯೋಗ ಹಾಗೂ ನೂರಾರು ಕನಸುಗಳನ್ನು ಹೊತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಉದ್ಯೋಗದಿಂದಲೂ ವಂಚಿತರಾಗುವ ಆತಂಕ ಮೂಡಿದೆ.

ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಮುಂದೇನು ಮಾಡಬೇಕು ಎಂಬ ಗೊಂದಲದಲ್ಲಿರುವ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಜಿಟಿಟಿಸಿ ಕಾಲೇಜ್ ನಿರ್ಮಿಸಲಾಗಿದೆ. ಕಾಲೇಜ್ ಉದ್ಘಾಟನೆಗೊಂಡು ವರ್ಷ ಕಳೆದರೂ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಪರಿಣಾಮ ಸುಲಭವಾಗಿ ಉದ್ಯೋಗ ಪಡೆಯುವ ಕೋರ್ಸ್‌ಗಳು ಪ್ರಾರಂಭಗೊಳ್ಳದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತೆ ಆಗಿದೆ.

ಏನಿದು ಜಿಟಿಟಿಸಿ: ವಿದ್ಯಾಭ್ಯಾಸ ಮುಗಿದ ತಕ್ಷಣ ಉದ್ಯೋಗ ಬಯಸುವವರಿಗೆ ಜಿಟಿಟಿಸಿ ಹೇಳಿ ಮಾಡಿಸಿದ ಕೋರ್ಸ್. ಈ ಕೋರ್ಸ್ ಅನ್ನು ಬಡ ಹಾಗೂ ಮಧ್ಯಮ ವರ್ಗದ ಪ್ರತಿಭೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ. 4 ವರ್ಷದ ಡಿಪ್ಲೊಮಾ ಕೋರ್ಸ್‌ನಿಂದ ಹಿಡಿದು ಅಲ್ಪಾವಧಿ ಸರ್ಟಿಫಿಕೆಟ್ ಕೋರ್ಸ್‌ಗಳು ಇಲ್ಲಿವೆ. ಒಂದು ವರ್ಷದ ಕಾಂಪೋಸಿಟ್ ಮೆಷಿನಿಸ್ಟ್ ಮತ್ತು ಎರಡು ವರ್ಷದ ಟೂಲ್ ಆ್ಯಂಡ್ ಡೈ ಟೆಕ್ನಿಷಿಯನ್, ಮೂರು ವರ್ಷದ ಕಾಂಫಿಟೆನ್ಸಿ ಸರ್ಟಿಫಿಕೆಟ್ ಡಿಪ್ಲೊಮಾ ಮುಂತಾದ ಅಲ್ಪಾವಧಿ ವೃತ್ತಿ ತರಬೇತಿ ಕೋರ್ಸ್‌ಗಳಿವೆ.

ಈ ಶಿಕ್ಷಣ ಪೂರೈಸಿದ ಅನೇಕರು ದೇಶ-ವಿದೇಶದ ಕಂಪನಿಗಳಲ್ಲಿದ್ದಾರೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಎಸ್ಸೆಸ್ಸೆಲ್ಸಿ ಪಾಸಾಗಿರುವ ವಿದ್ಯಾರ್ಥಿಗಳು ಜಿಟಿಟಿಸಿಯಲ್ಲಿ ಪ್ರವೇಶ ಪಡೆಯಬಹುದು. ಕೋರ್ಸ್‌ನ ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರತಿ ತಿಂಗಳು 10ರಿಂದ 13 ಸಾವಿರ ರೂ.ಗಳವರೆಗೆ ಗೌರವಧನ ನೀಡಲಾಗುತ್ತದೆ.

ಸರ್ಕಾರದಿಂದ ಅನುದಾನ ಬರಬೇಕಿದೆ. ನರಗುಂದದ ಜಿಟಿಟಿಸಿ ಕಾಲೇಜ್‌ನಲ್ಲಿ ಬಿಲ್ಡಿಂಗ್ ಹೊರತುಪಡಿಸಿದರೆ ಮತ್ತೇನು ಸೌಲಭ್ಯವಿಲ್ಲ. ಹೀಗಿದ್ದರೂ ಗರಿಷ್ಠ 30 ವಿದ್ಯಾರ್ಥಿಗಳಿಗೆ ಒಂದು ವರ್ಷದ ವೆಹಿಕಲ್ ಅಸೆಂಬ್ಲಿ ಫಿಟ್ಟರ್(ಸ್ಕಿಲ್ ಡೆವಲಪ್‌ಮೆಂಟ್) ಕೌಶಲ ಅಭಿವೃದ್ಧಿ ಕೋರ್ಸ್ ಪ್ರಾರಂಭಿಸಲು ಎಲ್ಲ ಪ್ರಚಾರ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳ ಟ್ರೇನಿಂಗ್ ಟೂಲ್ಕಿಟ್, ಮಷಿನ್, ಮುಂತಾದವುಗಳಿಗೆ ಸರ್ಕಾರದಿಂದ ಅನುದಾನ ಬಂದ ತಕ್ಷಣವೇ ಎಲ್ಲ ಕೋರ್ಸ್ ಪ್ರಾರಂಭಿಸಲಾಗುವುದು.-ಮಾರುತಿ ಭಜಂತ್ರಿ, ನರಗುಂದ ಜಿಟಿಟಿಸಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net