ಸಾವಯವ ಕೃಷಿಯಲ್ಲಿ ರೈತ ಖುಷಿ

28-nrd story savayav
Published on

ನರಗುಂದ: ಕೃಷಿಯಲ್ಲಿ ಲಾಭ ಕಡಿಮೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಹಲವು ರೈತರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ, ತಾಲೂಕಿನ ರೈತರೊಬ್ಬರು ಮಳೆಯ ಅನಿಶ್ಚಿತತೆ ನಡುವೆಯೂ ಬೆಣ್ಣೆಹಳ್ಳದ ನೀರಿನ ಸದ್ಬಳಕೆ ಮಾಡಿಕೊಂಡು ಸಮಗ್ರ ಸಾವಯವ ಕೃಷಿ ಪದ್ಧತಿಯಡಿ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.
ತಾಲೂಕಿನ ಖಾನಾಪುರ ಗ್ರಾಮದ ನಾಗನಗೌಡ ಯಲ್ಲಪ್ಪಗೌಡ ಕಗಧಾಳ ಎಂಬುವರು 2 ಎಕರೆ ಜಮೀನಿನಲ್ಲಿ ಕೃಷಿ ಹೊಂಡ, ಎರೆಹುಳು ಘಟಕ, ಸಾವಯವ ಸಂಸ್ಕರಣೆ ಘಟಕ ಸ್ಥಾಪಿಸಿ ಉತ್ತಮ ಫಸಲು ಬೆಳೆಯುತ್ತಿದ್ದಾರೆ.
ರಸ್ತೆಯಲ್ಲಿ ಬಿದ್ದ ಸೆಗಣಿ, ವಿವಿಧ ಕೃಷಿ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರಿಸುತ್ತಾರೆ. ಗೋಮೂತ್ರ, ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ ಬಳಸಿ ಜೀವಾಮೃತ, ಪಂಚಗವ್ಯ, ವೇಸ್ಟ್ ಡಿಕಂಪೋಸರ್‌ನಿಂದ ಸಾವಯವ ಗೊಬ್ಬರ ತಯಾರಿಸಿ ಮಿಶ್ರಬೆಳೆ ಪದ್ಧತಿಯೊಂದಿಗೆ ಅಂತರ್ ಬೆಳೆ ಬೆಳೆಯುತ್ತಾರೆ.
300 ಶ್ರೀಗಂಧ, 100 ಬಾಳೆ, 40 ಲಿಂಬೆ, 40 ತೆಂಗು, 30 ಸಾಗವಾನಿ, 2 ಆಪಲ್ ಬಾರಿ, 3 ಮಾವು, 2 ಅಡಕೆ, ಅರಿಷಿಣ, 20 ಶತಾವರಿ, 200 ಪೇರಲ, ಜಿಂಜರ್ ದ್ರಾಕ್ಷಿ, 150 ನುಗ್ಗೆ, ಕರಿಬೇವು ಮತ್ತಿತರ ಗಿಡಗಳನ್ನು ಬೆಳೆದಿದ್ದಾರೆ. ದೀರ್ಘಾವಧಿ ಶ್ರೀಗಂಧ ಬೆಳೆಯ ಮಧ್ಯದಲ್ಲಿ ಕಡಲೆ, ಹೆಸರು, ಕೋತಂಬರಿ ಸೊಪ್ಪು ಬೆಳೆಯುತ್ತಿದ್ದರು. ಆದರೀಗ 20 ಗುಂಟೆಯಲ್ಲಿ ಸುಗಂಧಿ ಹೂವು ಬೆಳೆದಿದ್ದು, ವರ್ಷಕ್ಕೆ 2.50 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ತೋಟದ ಕೆಲಸ ಮಾಡುವ ನಾಗನಗೌಡ, 11 ಗಂಟೆ ನಂತರ ವಿವಿಧೆಡೆ ಮಾರಾಟ ಮಾಡುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಪತ್ನಿ ರೇಖಾ ಬೆಳಗ್ಗೆ 11ರಿಂದ ಸಂಜೆವರೆಗೆ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಾರೆ.
ಶ್ರೇಷ್ಠ ಕೃಷಿ ಪ್ರಶಸ್ತಿ: ನಾಗನಗೌಡ ಕಗಧಾಳ ಅವರಿಗೆ 2019-20ನೇ ಸಾಲಿನಲ್ಲಿ ನರಗುಂದ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿ ವಿವಿಧ ಸಂಘ- ಸಂಸ್ಥೆಗಳ ಪ್ರಶಸ್ತಿ ಬಂದಿವೆ.

ಜನರಿಗೆ ವಿಷಮುಕ್ತ ಆಹಾರ ಕೊಡಬೇಕೆನ್ನುವ ಉದ್ದೇಶದಿಂದ ಕೃಷಿ ತ್ಯಾಜ್ಯ ಮರುಬಳಕೆ ಮಾಡಿಕೊಂಡು ಸಂಪೂರ್ಣ ಸಾವಯವ ಕೃಷಿಯಲ್ಲಿ ತೊಡಗಿದ್ದೇನೆ. ಕೃಷಿ ಅಧಿಕಾರಿಗಳ ಸಲಹೆಯಂತೆ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಲಾಭದ ಬದಲು ಆರೋಗ್ಯಕರ ಜೀವನಕ್ಕಾಗಿ ಎಲ್ಲರೂ ಸಮಗ್ರ ಸಾವಯವ ಕೃಷಿ ಪದ್ಧತಿ ಪಾಲಿಸಬೇಕು.ನಾಗನಗೌಡ ಕಗಧಾಳ ರೈತ ನಾಗನಗೌಡ ಕಗಧಾಳ ಅವರು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸ್ವಯಂಪ್ರೇರಿತರಾಗಿ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಸಮಗ್ರ ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ಹೆಚ್ಚಿಸುವುದರ ಜತೆಗೆ ಉತ್ತಮ ಇಳುವರಿ, ನಿರಂತರ ಆದಾಯ ಪಡೆಯಬಹುದು.ನವೀನಕುಮಾರ ಪಾಟೀಲ ಕೃಷಿ ಅಧಿಕಾರಿ ನರಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net