

ನರಗುಂದ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಭೈರನಹಟ್ಟಿ ಗ್ರಾಮದ ದೊಡ್ಡ ಕಾಲುವೆ ಬಳಿ ಬುಧವಾರ ನಸುಕಿನ ಜಾವ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದ ನಿವಾಸಿ, ಕೆಎಸ್ಆರ್ಟಿಸಿ ನಿರ್ವಾಹಕ ಸಿದ್ದರಾಮಪ್ಪ ಯಲ್ಲಪ್ಪ ಛಬ್ಬಿ (42), ಈತನ ಪತ್ನಿ ಹೇಮಾ ಸಿದ್ದರಾಮಪ್ಪ ಛಬ್ಬಿ (31) ಮೃತಪಟ್ಟಿದ್ದಾರೆ. ಇವರ ಪುತ್ರಿ ಸಾಹಿತ್ಯ (9), ಪುತ್ರ ಮಲ್ಲಿಕಾರ್ಜುನ (7), ಇವರ ಅಳಿಯ, ವಿಜಯಪುರ ಜಿಲ್ಲೆ ಕೋರ್ತಿ ಕೋಲಾರದ ಶಿವಾಜಿನಗರ ಬಡಾವಣೆ ನಿವಾಸಿ ಸುನೀಲ ಸುರೇಶ ಮಡ್ಡಣ್ಣವರ (30) ಎಂಬುವವರಿಗೆ ಗಂಭೀರವಾದ ಗಾಯಗಳಾಗಿದ್ದು, ಮೂವರಿಗೂ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿದ್ರೆ ಮಂಪರಿನಲ್ಲಿ ಅಪಘಾತ: ಬಾಗಲಕೋಟೆ ಜಿಲ್ಲೆಯವರಾದ ಸಿದ್ಧರಾಮಪ್ಪ, ಪತ್ನಿ ಹೇಮಾ, ಇಬ್ಬರು ಮಕ್ಕಳು ಮತ್ತು ಹೇಮಾಳ ಸಹೋದರ ಸುನೀಲ ಮಡ್ಡಣ್ಣವರ ಸೇರಿ ಒಟ್ಟು ಐವರು ಸೋಮವಾರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿದ್ದರು. ಮಂಗಳವಾರ ರಾತ್ರಿ ದರ್ಶನ ಮುಗಿಸಿಕೊಂಡು ನರಗುಂದ ಮಾರ್ಗವಾಗಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಚಾಲಕನ ನಿದ್ರೆ ಮಂಪರಿನಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು, ಕಾರು ನಜ್ಜುಗುಜ್ಜಾಗಿದೆ. ಕಾರಿನ ಅವಶೇಷದಡಿ ಸಿಲುಕಿದ್ದ ದಂಪತಿಯ ಮೃತ ದೇಹಗಳನ್ನು ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ಹೊರತೆಗೆದರು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಲಾರಿ ವಶಕ್ಕೆ ಪಡೆದಿರುವ ನರಗುಂದ ಸಿಪಿಐ ಮಂಜುನಾಥ ನಡುವಿನಮನಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತಗಳಿಗೆ ಹೊಣೆ ಯಾರು: ನರಗುಂದದಲ್ಲಿರುವ ಹುಬ್ಬಳ್ಳಿ-ವಿಜಯಪುರ ಮಾರ್ಗದ ರಸ್ತೆ ಹೇಳಿಕೊಳ್ಳಲು ಎನ್.ಎಚ್-4 ರಾಷ್ಟ್ರೀಯ ಹೆದ್ದಾರಿ. ಆದರೆ, ಅವೈಜ್ಞಾನಿಕ ಅಪೂರ್ಣ ಕಾಮಗಾರಿಯಿಂದ ರಸ್ತೆ ತುಂಬ ಉಬ್ಬು, ದಿಬ್ಬಗಳಿವೆ. ಅಪಘಾತ ವಲಯಗಳಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ರಸ್ತೆ ಮಧ್ಯದಲ್ಲಿ ಕೆಂಪು-ಹಳದಿ ರಿಫ್ಲೆಕ್ಟರ್ ಅಳವಡಿಸಿಲ್ಲ. ರಸ್ತೆ ಪಕ್ಕ ಮುಳ್ಳಿನ ಕಂಟಿಗಳು ಬೆಳೆದಿವೆ. ಈ ರಸ್ತೆಯಲ್ಲಿ ಆಗಾಗ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣವೇ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.