

ನರಗುಂದ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಪಾತ್ರ ಬಹಳ ಮಹತ್ತರವಾದುದು. ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾರಂಗ ಸಮಾಜದ ಕಾವಲುಗಾರನಾಗಿ ಕೆಲಸ ಮಾಡುತ್ತದೆ ಎಂದು ಎಸ್‌ವೈಎಸ್ ಶಿಕ್ಷಣಸಂಸ್ಥೆ ನಿರ್ದೇಶಕ, ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಬಿ. ಇಡಿ ಕಾಲೇಜ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ನರಗುಂದ ತಾಲೂಕಿನ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶ ಕಾಯುವ ಯೋಧರು, ಜಗತ್ತಿಗೆ ಅನ್ನ ನೀಡುವ ರೈತರಂತೆ ಪತ್ರಕರ್ತರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಉತ್ತರ ಕರ್ನಾಟಕದ ವಿವಿಧ ಮಠಮಾನ್ಯಗಳು, ಶಿಕ್ಷಣ ಸಂಸ್ಥೆಗಳ ಶ್ರಯೋಭಿವೃದ್ಧಿಗೆ ಪತ್ರಕರ್ತರ ಸೇವೆ ಅಮೋಘವಾದುದು. ಪತ್ರಿಕೆಗಳು ಮತ್ತು ಪತ್ರಕರ್ತರು ಇಲ್ಲದೆ ಹೋಗಿದ್ದರೆ ಪ್ರಜಾಪ್ರಭುತ್ವಕ್ಕೆ ಮನ್ನಣೆ ದೊರೆಯುತ್ತಿರಲಿಲ್ಲ. ಪತ್ರಕರ್ತರು ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ಸದಾ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.
ಉಪನ್ಯಾಸಕ ಎಂ.ಈ. ವಿಶ್ವಕರ್ಮ ಮಾತನಾಡಿ, ಪತ್ರಿಕೆಗಳು ಸರ್ವಧರ್ಮ ಸಾಮಾಜಿಕ ಏಕತೆಯ ಸಂದೇಶವಾಗಿವೆ. ಸಮಾಜ ಸೇವೆಗೆ ಅಣಿಯಾಗಿರುವ ಪತ್ರಿಕಾ ಧರ್ಮವು ಎಲ್ಲ ಜಾತಿ, ಮತ, ಧರ್ಮದ ವ್ಯವಸ್ಥೆಯನ್ನು ಮೀರಿದ್ದಾಗಿದೆ. ಎಲ್ಲರೊಂದಿಗೆ ಒಂದಾಗಿ ಏಕತೆಯ ಭಾವವನ್ನು ಪತ್ರಿಕೆಗಳು ಬೇಸೆಯುತ್ತಿವೆ. ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಒದಗಿಸಿಕೊಡುವುದರ ಜತೆಗೆ ಅಕ್ಷರದ ಜ್ಞಾನಾರ್ಜನೆ ನೀಡುತ್ತಿವೆ. ವಿದ್ಯಾರ್ಥಿಗಳು ಭವಿಷ್ಯದ ಜೀವನ ರೂಪಿಸಿಕೊಳ್ಳಬೇಕಾದರೆ ನಿತ್ಯ ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪತ್ರಿಕಾ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು.
ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ವೀರನಗೌಡ ಪಾಟೀಲ, ಕಾರ್ಯದರ್ಶಿ ಮಹೇಶ ಪಾಟೀಲ, ಬಿ. ಇಡಿ ಕಾಲೇಜ್ ಪ್ರಾಚಾರ್ಯ ಆರ್.ಬಿ. ಪಾಟೀಲ, ಪಿಯು ಕಾಲೇಜ್ ಪ್ರಾಚಾರ್ಯ ಎಂ.ಜಿ. ಬೋಗಾರ, ಸಿಬಿಎಸ್‌ಇ ಶಾಲೆ ಪ್ರಾಚಾರ್ಯ ಸತೀಶ್ಚಂದ್ರ ಎಚ್.ವಿ., ರಾಜು ಹೊಸಮನಿ, ಸಿ.ಸಿ. ಸುಬೇದಾರ, ಸಿದ್ಧಲಿಂಗಯ್ಯ ಮಣ್ಣೂರಮಠ, ಬಿ.ವೈ. ಹಲಕುರ್ಕಿ, ಎಸ್.ಎಸ್. ಖಾನಪ್ಪಗೌಡ್ರ, ಎಸ್.ಜಿ. ತೆಗ್ಗಿನಮನಿ, ಝಡ್.ಎಂ. ಖಾಜಿ, ರಮೇಶ ಮೋಟೆ, ಮಹೇಶ ಇದ್ದರು. ಕಾಲೇಜ್ ವಿದ್ಯಾರ್ಥಿನಿ ಶ್ರೀದೇವಿ ನೀಡಗುಂದಿ, ಪ್ರಿಯಾ ದೊಡಮನಿ ಅವರಿಂದ ಸಂಗೀತ, ಗ್ರಂಥಪಾಲಕಿ ವಿ.ಎಸ್. ಪಾರ್ವತಿ ಅತಿಥಿಗಳನ್ನು ಪರಿಚಯಿಸಿದರು. ಎಂ.ಪಿ. ಕ್ಯಾತನಗೌಡ್ರ, ಎನ್.ಬಿ. ಮ್ಯಾಗೇರಿ, ಎಸ್.ಎ. ಬಾರಕೇರ, ಡಿ.ಆರ್. ಕಲಬುರ್ಗಿ ಕಾರ್ಯಕ್ರಮ ನಿರ್ವಹಿಸಿದರು.