

ನರಗುಂದ: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ಜರುಗಿದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಅಧ್ಯಕ್ಷರಾಗಿ ಬಿಜೆಪಿಯ ಭಾವನಾ ಸಿದ್ದನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಪ್ರಶಾಂತ ಜೋಶಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಭಾವನಾ ಪಾಟೀಲ, ಕಾಂಗ್ರೆಸ್ನಿಂದ ಗಂಗವ್ವ ಬಿದರಗಡ್ಡಿ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಪ್ರಶಾಂತ ಜೋಶಿ, ಕಾಂಗ್ರೆಸ್ನಿಂದ ಯಲ್ಲಪ್ಪಗೌಡ ನಾಯ್ಕರ ನಾಮಪತ್ರ ಸಲ್ಲಿಸಿದ್ದರು. 6 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಸೇರಿ ಒಟ್ಟು 18 ಸದಸ್ಯರ ಬೆಂಬಲದೊಂದಿಗೆ ಭಾವನಾ ಪಾಟೀಲ ಅಧ್ಯಕ್ಷೆಯಾಗಿ, ಪ್ರಶಾಂತ ಜೋಶಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ಎ.ಎಚ್. ಮಹೇಂದ್ರ ತಿಳಿಸಿದರು.
ಕಾಂಗ್ರೆಸ್ನಿಂದ ನಾಮ ಪತ್ರ ಸಲ್ಲಿಸಿದ್ದ ಗಂಗವ್ವ ಬಿದರಗಡ್ಡಿ, ಯಲ್ಲಪ್ಪಗೌಡ ನಾಯ್ಕರ ಇನ್ನುಳಿದ ನಾಲ್ವರು ಸದಸ್ಯರೊಂದಿಗೆ ಚುನಾವಣೆ ಪ್ರಕ್ರಿಯೆಗೆ ತಡವಾಗಿ ಹಾಜರಾಗಿದ್ದರಿಂದ ಮುಜುಗರ ಅನುಭವಿಸುವಂತಾಯಿತು.
ಸಚಿವ ಸಿ.ಸಿ. ಪಾಟೀಲ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿ, ಬಿಜೆಪಿಗೆ ನರಗುಂದದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಆಶೀರ್ವಾದ ಮಾಡಿದ್ದಾರೆ. ಇದರಿಂದ 17 ಜನ ಬಿಜೆಪಿ ಸದಸ್ಯರು ಆಯ್ಕೆಗೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಸ್ವಷ್ಟ ಬಹುಮತವಿದ್ದರೂ ಕಾಂಗ್ರೆಸ್ನ ಕುತಂತ್ರ ಬುದ್ಧಿಯಿಂದಾಗಿ ಇಂದಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಎದುರಿಸುವಂತಾಗಿದೆ. ಇಲ್ಲದಿದ್ದರೆ ನಮ್ಮ ಪಕ್ಷದ ಸದಸ್ಯರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತವಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಮಹೇಶ ಬೋಳಶೆಟ್ಟಿ, ದೇವರಾಜ ಕಲಾಲ, ಸುನೀಲ ಕುಷ್ಟಗಿ, ರಜೀಯಾಬೇಗಂ ತಹಶೀಲ್ದಾರ, ರೇಣವ್ವ ಕಲ್ಲಾರಿ, ರಾಚನಗೌಡ ಪಾಟೀಲ, ಬಸು ಪಾಟೀಲ, ಪ್ರಕಾಶ ಹಾದಿಮನಿ, ಹುಸೇನಸಾಬ ಗೋಟುರ, ಮಂಜು ಮೆಣಸಗಿ, ನಾಗರಾಜ ನೆಗಳೂರ, ಸಂತೋಷ ಹಂಚಿನಾಳ, ಅನ್ನಪೂರ್ಣಾ ಯಲಿಗಾರ, ಚಂದ್ರಗೌಡ ಪಾಟೀಲ, ರಾಜೇಶ್ವರಿ ಹವಾಲ್ದಾರ, ಎಂ.ಪಿ. ಪಟ್ಟಣಶೆಟ್ಟಿ, ಎನ್.ಪಿ. ವಡ್ಡಿಗೇರಿ, ಕೆ.ಬಿ.ಮಳಗಿ ಇತರರಿದ್ದರು.
ಮನೆಗೆ ಹೋಗುತ್ತಿದ್ದ ಸದಸ್ಯೆ… ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಬುಧವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಭೆ ಹಮ್ಮಿಕೊಂಡಿದ್ದರು. ಈ ವೇಳೆ ಅಧಿಕಾರಾವಧಿ ಹಂಚಿಕೆ ಮಾಡಿ ಎಲ್ಲರ ಸರ್ವಾನುಮತದಿಂದ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದರು. ಆದರೆ, ಅನಾರೋಗ್ಯದ ಹಿನ್ನೆಲೆ ಕವಿತಾ ಅರ್ಭಣದ ಎಂಬುವರು ಚುನಾವಣೆಗೂ ಮುನ್ನವೇ ಮಾತ್ರೆ ತರಲು ಮನೆಗೆ ಹೋಗುತ್ತಿದ್ದರು. ಇದನ್ನು ಗಮನಿಸಿದ ಸಚಿವರು ಬೆಂಬಲಿಗರಿಗೆ ತಿಳಿಸಿ ಕವಿತಾ ಅವರನ್ನು ಮತ್ತೆ ಕರೆ ತಂದರು.