

ನರಗುಂದ: ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಪಟ್ಟಣದ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕೆ (ಎಂಎಸ್‌ಪಿಸಿ) ಕೇಂದ್ರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ರೋಣ ಮತ್ತು ನರಗುಂದ ತಾಲೂಕಿನ ನೂರಾರು ಅಂಗನವಾಡಿ ಕೇಂದ್ರಗಳಿಗೆ ಇಲ್ಲಿಂದ ಪೌಷ್ಟಿಕ ಆಹಾರ ವಿತರಿಲಾಗುತ್ತಿದೆ. ಸರ್ಕಾರ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದರಿಂದ ಎಂಎಸ್‌ಪಿಸಿ ಘಟಕ ಸಂಕಷ್ಟ ಎದುರಿಸುವಂತಾಗಿದೆ. ಘಟಕದ ಸಿಬ್ಬಂದಿ ಸಂಬಳವಿಲ್ಲದೆ ಆಹಾರ ಪೂರೈಕೆಗೆ ಹೆಣಗಾಡುವ ಸ್ಥಿತಿಯಿದೆ.
ನರಗುಂದದ ಟಿಎಪಿಸಿಎಂಎಸ್ ಆವರಣದಲ್ಲಿರುವ ಎಂಎಸ್‌ಪಿಸಿ ಘಟಕದಿಂದ ನರಗುಂದ ತಾಲೂಕಿನ 134, ರೋಣ ತಾಲೂಕಿನ 312 ಸೇರಿ ಒಟ್ಟು 446 ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳು ಅಕ್ಕಿ, ಬೆಲ್ಲ, ಸಕ್ಕರೆ, ಮೆಣಸಿನಕಾಯಿ, ಹುಣಸೆಹಣ್ಣು, ಹೆಸರು, ತೊಗರಿ ಬೇಳೆ, ಶೇಂಗಾ ಚಿಕ್ಕಿ, ಉಪ್ಪು, ಸಾಸಿವೆ, ಗೋಧಿ ರವಾ ಹಾಗೂ ಮಸಾಲೆ ಪದಾರ್ಥಗಳನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದೆ. ರೋಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು 2022ರ ಅಕ್ಟೋಬರ್‌ನಿಂದ 2023ರ ಜುಲೈ ವರೆಗಿನ 3.25 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ನರಗುಂದದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 1.19 ಕೋಟಿ ಬಾಕಿ ಬರಬೇಕಿದೆ. ಪರಿಣಾಮ ಎಂಎಸ್‌ಪಿಸಿಯಿಂದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಧಾನ್ಯ ಪೂರೈಸುವುದು ಕಷ್ಟವಾಗಿದೆ.
ಪೌಷ್ಟಿಕ ಸಿದ್ಧಪಡಿಸುವ 22 ಮಹಿಳೆಯರು, ಯೋಜನಾ ಸಂಯೋಜಕಿ, ಇಬ್ಬರು ತಾಂತ್ರಿಕ ಸಿಬ್ಬಂದಿ, ವಾಹನ ಚಾಲಕ, ಸಹಾಯಕ ಸಿಬ್ಬಂದಿಗೂ ಆರು ತಿಂಗಳಿನಿಂದ ಗೌರವಧನ ನೀಡಿಲ್ಲ. ಕಚ್ಚಾ ಸಾಮಗ್ರಿಗಳ ಪೂರೈಕೆ ಹೊರತುಪಡಿಸಿದರೆ ಗೋದಾಮಿನ ಬಾಡಿಗೆ, ಡೀಸೆಲ್, ವಿವಿಧ ಯಂತ್ರೋಪಕರಣ ರಿಪೇರಿಗೂ ಹಣವಿಲ್ಲ. ಆರು ತಿಂಗಳಿಂದ ಸಹಾಯಧನವಿಲ್ಲದೆ ಸಿಬ್ಬಂದಿಯ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
‘ಆರು ವರ್ಷದೊಳಗಿನ ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವುದು ಹಾಗೂ ಅವರ ಆರೋಗ್ಯ ಸ್ಥಿತಿ ಸುಧಾರಿಸಲು ಸರ್ಕಾರ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಜಾರಿಗೊಳಿಸಿದೆ. ಆದರೆ, ಸರ್ಕಾರವೇ ನಿಗದಿತ ಸಮಯಕ್ಕೆ ಹಣ ಪಾವತಿಸದಿರುವುದರಿಂದ ಎರಡು ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಸಮಗ್ರ ಅಧ್ಯಯನ ಕೈಗೊಳ್ಳುವುದರ ಜತೆಗೆ ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸಲು ಜಾಗೃತಿ ಆಂದೋಲನ ನಡೆಸಬೇಕು’ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ನರಗುಂದ ಮತ್ತು ರೋಣ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೂರೈಸಿರುವ ಪೌಷ್ಟಿಕ ಆಹಾರದ ಬಾಕಿ ಹಣ ಪಾವತಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಇದುವರೆಗೂ ಬಿಲ್ ಪಾವತಿಯಾಗಿಲ್ಲ. ಪೌಷ್ಟಿಕ ಆಹಾರ ಪೂರೈಕೆಯಿರಲಿ ಹಮಾಲರ ಕೂಲಿ ಹಣ ಪಾವತಿಸಲೂ ಸಾಧ್ಯವಾಗದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಬಾಕಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು.ಚಂದ್ರಕಲಾ ಕೋಟಿ ಎಂಎಸ್‌ಪಿಸಿ ಯೋಜನಾ ಸಂಯೋಜಕಿ ನರಗುಂದದ ಸಿಡಿಪಿಒ ಇಲಾಖೆಗೆ ಜನವರಿ ತಿಂಗಳಿಂದ ಏಪ್ರಿಲ್ ವರೆಗೆ ಪೂರೈಕೆ ಮಾಡಿರುವ ಪೌಷ್ಟಿಕ ಆಹಾರದ ಬಾಕಿ ಬಿಲ್ ಮೊತ್ತದಲ್ಲಿ 68 ಲಕ್ಷ ರೂ. ಶನಿವಾರ ಪಾವತಿಯಾಗಿದೆ. ಉಳಿದ ಮೊತ್ತವನ್ನು ಇಲಾಖೆಯ ನಿರ್ದೇಶನದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ.ರೂಪಾ ಗಂಧದನರಗುಂದ ಸಿಡಿಪಿಒ ತಾಲೂಕಿಗೆ 15 ದಿನಗಳ ಹಿಂದೆಯಷ್ಟೆ ಸಿಡಿಪಿಒ ಆಗಿ ನೇಮಕ ಗೊಂಡಿದ್ದೇನೆ. ನರಗುಂದದ ಎಂಎಸ್‌ಪಿಸಿ ಕೇಂದ್ರಕ್ಕೆ ಬಾಕಿ ಬಿಲ್ ಪಾವತಿಸುವುದರ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.ಬಸಮ್ಮ ಹೂಲಿ ರೋಣ ಸಿಡಿಪಿಒ