

ಅಕ್ಷರಾಭ್ಯಾಸ ಸಂಪನ್ನ
ನಾಪೋಕ್ಲು: ಸಮೀಪದ ಬಲಮುರಿಯ ಕಾವೇರಿ ಕಣ್ವ ಮುನೀಶ್ವರ ಸಭಾಂಗಣದಲ್ಲಿ ಶುಕ್ರವಾರ ಸಾಮೂಹಿಕ ಸರಸ್ವತಿ ಪೂಜೆ ಕಾರ್ಯಕ್ರಮ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಮೈಸೂರು ನಾ. ಶ್ರೀನಿವಾಸ ಮಾತನಾಡಿ, ಪ್ರತಿಯೊಬ್ಬರೂ ತಮ್ಮೊಳಗಿರುವ ಬುದ್ಧಿಶಕ್ತಿಯನ್ನು ಉಪಯೋಗ ಮಾಡಿಕೊಂಡು ಪ್ರಗತಿ ಹೊಂದಬೇಕು ಎಂದು ಹೇಳಿದರು.ಬುದ್ಧಿಶಕ್ತಿ ಬಳಕೆಯಾಗಬೇಕು ಎಂದರೆ ಅದಕ್ಕೆ ಒಂದು ಸ್ಫೂರ್ತಿ ಬೇಕು. ಇದಕ್ಕೆ ಕಲಿಕೆಯೇ ಮೂಲ. ನಮ್ಮ ಅಧ್ಯಯನ ಹೆಚ್ಚು ಹೆಚ್ಚು ಆಳಕ್ಕೆ ಹೋದಾಗ ಅದು ಪ್ರಖರವಾಗಿ ಬೆಳಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮಯದ ಸದುಪಯೋಗ ಮಾಡಿಕೊಂಡು ಕಲಿಕೆಯತ್ತ ಗಮನ ಹರಿಸಬೇಕು. ಜ್ಞಾನಜ್ಯೋತಿ ಬೆಳಗಬೇಕು ಎಂದು ಸರಸ್ವತಿ ಮಾತೆಯಲ್ಲಿ ಪ್ರಾರ್ಥನೆ ಮಾಡಿಕೊಂಡು ಮುಂದೆ ಸಾಗಬೇಕು ಎಂದರು.ಜ್ಞಾನಜ್ಯೋತಿ ಶಾಲೆ ಅಧ್ಯಕ್ಷ ರವಿ ಚೀಯಣ್ಣ ಮಾತನಾಡಿ, ಪ್ರತಿಯೊಬ್ಬರೂ ತಮಗೆ ದೊರಕುವ ಸದವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ವಿದ್ಯಾವಂತರಾಗಬೇಕು. ವಿದ್ಯೆ ಇದ್ದವರಿಗೆ ಎಲ್ಲೆಡೆ ಮಾನ್ಯತೆ, ಗೌರವ ಇರುತ್ತದೆ. ವಿದ್ಯೆಗೆ ಸಮನಾದದ್ದು ಯಾವುದೂ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನೂಆಯೋಜಿಸಲಾಗಿತ್ತು. ಜಿಸಿಟಿ ಕಾರ್ಯದರ್ಶಿ ರವಿ ಭಟ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.