

ನಾಪೋಕ್ಲು : ಮಳೆಗಾಲ ಈ ಬಾರಿ ಆರಂಭವಾಗುವ ಮೊದಲೇ ಕ್ಷೇತ್ರದ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಚೆರಿಯಪರಂಬುವಿನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯನ್ನು ಸೇವೆಗೆ ಸಮರ್ಪಿಸಿ ಅವರು ಮಾತನಾಡಿ ದರು. ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಚೆರಿಯ ಪರಂಬು - ಕಲ್ಲುಮೊಟ್ಟೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಜನರು ಸಂಚಾರಕ್ಕೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತಿ ಬಾರಿ ಮಳೆಗಾಲದಲ್ಲಿ ರಸ್ತೆ ಮುಳುಗಡೆಯಾಗಿ ಸಂಕಷ್ಟ ಅನುಭವಿಸುವ ಸ್ಥಿತಿ ಇದೆ. ಈ ಬಾರಿ ಮಳೆಗಾಲ ಆರಂಭದ ಮೊದಲೇ ಅಭಿವೃದ್ಧಿ ಕಾಮಗಾರಿ, ವಿಸ್ತರಣೆ, ಉನ್ನತೀಕರಣ ಕಾಮಗಾರಿ ಪೂರ್ಣಗೊಳಿಸಲು ಬದ್ಧನಾಗಿರುವೆ ಎಂದರು. ರಸ್ತೆ ಕಾಮಗಾರಿಗಾಗಿ ಅಲ್ಪಸಂಖ್ಯಾತ ಇಲಾಖೆಯಿಂದ ವಿಶೇಷ ಅನುದಾನವನ್ನೂ ಪಡೆದುಕೊಳ್ಳಲಾಗಿದೆ. ಇಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿರುವುದರಿಂದ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆಯನ್ನು ಇಲಾಖೆ ಸಚಿವ ಜಮೀರ್ ಅಹ್ಮದ್‌ಗೆ ಸಲ್ಲಿಸಲಾಗಿತ್ತು. ಅವರು ಕೂಡಲೇ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಮತ್ತು ಡಿಸಿಎಂ ಸಹಕಾರ ಶ್ಲಾಘನೀಯ ಎಂದರು.
ಆಶ್ವಾಸನೆ ಈಡೇರಿದೆ: ನಾಪೋಕ್ಲು ಕಾಂಗ್ರೆಸ್ ವಲಯ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ ಮಾತನಾಡಿ, ಶಾಸಕರು
ಈ ಹಿಂದೆ ಗ್ರಾಮಸ್ಥರಿಗೆ ನೀಡಿದ್ದ ಆಶ್ವಾಸನೆಯಂಗೆ ಕಾಮಗಾರಿ ನಡೆದಿದೆ. ರಸ್ತೆಯು ಸಾರ್ವಜನಿಕರ ಬಳಕೆಗೆ ಲಭ್ಯ ವಾಗಿದೆ. ಇದು ಮೆಚ್ಚುವ ಸಂಗತಿ ಎಂದರು. ಗ್ರಾಮ ಪಂಚಾಯತಿ ಸದಸ್ಯ ಕುಲ್ಲೆಟಿರ ಅರುಣ ಬೇಬಾ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ, ಉಪಾಧ್ಯಕ್ಷ ಕಂಗಂಡ ಶಶಿ ಮಂದಣ್ಣ, ಸದಸ್ಯೆ ಕುಲ್ಲೆಟಿರ ಹೇಮಾ ಅರುಣ,ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್, ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ರಾಜೀವ ಗಾಂಧಿ ಸಂಘಟನಾ ಜಿಲ್ಲಾ ಅಧ್ಯಕ್ಷ ತೆನ್ನಿರಾ ಮೈನಾ , ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಬೊಲ್ಲಂಡ ಸರಿ, ಸಂಪನ್ ಅಯ್ಯಪ್ಪ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.