

ನಾಪೋಕ್ಲು: ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ (ಪುತ್ತರಿ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಂಪ್ರದಾಯದಂತೆ ಸನ್ನಿಧಿಯ ಸುತ್ತಮುತ್ತಲಿನ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆಯವರು ಹುತ್ತರಿ ಆಚರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಪ್ರಮುಖ ಐದು ಮನೆತನದ ಕುಟುಂಬದ ಹೆಣ್ಣು ಮಕ್ಕಳು ತಳಿಯತಕ್ಕಿ ಬೊಳಕ್‌ನೊಂದಿಗೆ ಬಂದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರು. ಈ ವೇಳೆ ಕಣಿಯರ ನಾಣಯ್ಯ, ಕುಡಿಯರ ಮುತ್ತಪ್ಪ ,ಪೆಮ್ಮಯ್ಯ, ಪೊಂಗೇರ ಪೂಣಚ್ಚ ಇನ್ನಿತರರು ಪುತ್ತರಿ ಪದ್ಧತಿ ಪರಂಪರೆಯನ್ನು ಪರಿಚಯಿಸುವುದರ ಮೂಲಕ ದುಡಿ ಕೊಟ್ಟ ಪಾಟ್ ನೆರವೇರಿಸಿಕೊಟ್ಟರು. ಹುತ್ತರಿ ಹಬ್ಬದ ಅಂಗವಾಗಿ ಪೊಂಗೇರ ಉಲ್ಲಾಸ್ ಅವರು ದೇವಾಲಯದಲ್ಲಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ತಳಿಯತಕ್ಕಿ ಬೊಳಕ್, ಡೋಲು, ಜಾಗಟೆಗಳ ನಿನಾದದೊಂದಿಗೆ ದೇವಾಲಯದ ಮುಕ್ಕಾಟಿ ಸುಬ್ರಮಣಿ ಅವರು ಬೆಳ್ಳಿಯ ಬಿಂದಿಗೆ ಹೊತ್ತು, ‘ಪೊಲಿ ಪೊಲಿಯೇ ಬಾ’ ಎಂಬ ಉದ್ಘೋಷ ಮತ್ತು ಪಟಾಕಿಗಳ ಮೊರೆತದೊಂದಿಗೆ ಪೊಂಗೇರ ಅಪ್ಪಣ್ಣ ಅವರ ಮಾವುಬಲ್ಯ ಗದ್ದೆಗೆ ತೆರಳಲಾಯಿತು. ಗದ್ದೆಯಲ್ಲಿ ಕದಿರು ಕೊಯ್ಯುವುದಕ್ಕೂ ಮುನ್ನ ಸುಬ್ರಮಣಿ ಅವರು ವಿಧಿವಿಧಾನಗಳನ್ನು ನೆರವೇರಿಸಿದರು. ಕದಿರು ಕಟ್ಟಿ ಹಾಲು ತುಪ್ಪ ಬಿಟ್ಟು ಪ್ರಾರ್ಥನೆ ಸಲ್ಲಿಸಿ ಶುಭ ಮುಹೂರ್ತದಲ್ಲಿ ಸುಬ್ರಮಣಿ ಅವರು ಕದಿರು ಕೊಯ್ದು ನೆರೆದವರ ಕೈಗೆ ನೀಡಿದರು. ಈ ವೇಳೆ ಶುಭ ಸೂಚಕವಾಗಿ ಗುಂಡು ಹಾರಿಸಲಾಯಿತು. ಪಟಾಕಿಗಳ ಶಬ್ದ ಮುಗಿಲು ಮುಟ್ಟಿತು. ಪೊಲಿ ಪೊಲಿಯೇ ದೇವಾ ಎಂಬ ಉದ್ಘೋಷಗಳು ಮೊಳಗಿದವು.
ಅನಂತರ ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಸನ್ನಿಧಿಗೆ ಬಂದು ಕದಿರನ್ನು ಮಂಟಪದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಮುಖ್ಯ ಅರ್ಚಕ ಕುಶ ಭಟ್, ಜಗದೀಶ್, ಶ್ರೀಕಾಂತ್ ಮತ್ತು ತಂಡ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.
ಮೊದಲ ಕದಿರನ್ನು ಗರ್ಭಗುಡಿಯಲ್ಲಿ ಕಟ್ಟಿ ಅನಂತರ ಇತರ ಗುಡಿಗಳಿಗೆ ಕಟ್ಟಲಾಯಿತು. ನೆರೆದಿದ್ದ ಭಕ್ತರಿಗೆ ಕದಿರು ಹಾಗೂ ಪ್ರಸಾದ ವಿತರಿಸಲಾಯಿತು. ಕಂದಾಯ ಪರಿವೀಕ್ಷಕ ರವಿಕುಮಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಹಾಗೂ ಭಕ್ತರು ಹಾಜರಿದ್ದರು.