ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ಸಂಪನ್ನ

5..npk .1
Published on

ನಾಪೋಕ್ಲು: ಇಲ್ಲಿನ ಪೊನ್ನುಮುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು. ಈ ಸಂದರ್ಭ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು.
ಬುಧವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಉತ್ಸವ ಆರಂಭಗೊಂಡಿತು. ಗುರುವಾರ ಸಂಜೆ ಮುತ್ತಪ್ಪ ದೇವರ ಕಳಸ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಮಹಿಳೆಯರಿಂದ ತಳಿಯಕ್ಕಿ ಬೊಳಕ್ ಹಾಗೂ ಕೇರಳದ ಪ್ರಖ್ಯಾತ ಚಂಡೆಯೊಂದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಕಳಸ ಮೆರವಣಿಗೆ ನಡೆಯಿತು. ಈ ಸಂದರ್ಭ ಭಕ್ತಾದಿಗಳಿಂದ ಹಣ್ಣು ಕಾಯಿ, ಈಡು ಕಾಯಿ ಸೇವೆ ಸಮರ್ಪಿಸಿದರು. ಅತ್ಯಾಕರ್ಷಕ ಪಟಾಕಿ, ಬಾಣ- ಬಿರುಸು ಗಮನ ಸೆಳೆಯಿತು. ಶುಕ್ರವಾರ ಭಕ್ತರಿಗೆ ಅನ್ನದಾನ ನೆರವೇರಿದ ಬಳಿಕ ಮುತ್ತಪ್ಪ ದೇವರ ಹಾಗೂ ಕುಟ್ಟಿಚಾತ ಬೊಳ್ಳಾಟಂ ಜರುಗಿತು. ಗುಳಿಗ,ತಿರುವಪ್ಪ ಹಾಗೂ ಮುತ್ತಪ್ಪ , ಕುಟ್ಟಿಚಾತ ತೆರೆಗಳು ಜರುಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ .ಚಂದ್ರನ್, ಉಪಾಧ್ಯಕ್ಷ ಸುಕುಮಾರ, ಕಾರ್ಯದರ್ಶಿ ರಾಜೀವನ್, ಪದಾಧಿಕಾರಿಗಳಾದ ಎಂ. ಕೆ. ತಂಗಾ, ಖಜಾಂಚಿ ವಿನಿಲ್ ಪಪ್ಪು ಮತ್ತು ಗ್ರಾಮದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net