ಏಲಕ್ಕಿ ಕೃಷಿಯಲ್ಲಿ ನಾಪಂಡ ಪೂವಯ್ಯಸಾಧನೆ

1-napanda poovaiah
Published on

 ಸೋಮವಾರಪೇಟೆ: ಕಾಫಿ ಕೃಷಿಯಲ್ಲಿ ತೊಡಗಿಕೊಂಡಿರುವ ಕೃಷಿಕರೊಬ್ಬರು ಉಪ ಬೆಳೆಯಾಗಿ ಏಲಕ್ಕಿಯನ್ನೂ ಬೆಳೆದು ಸಾಧನೆ ಮಾಡಿದ್ದಾರೆ. ಒಂದೇ ಬೆಳೆಯನ್ನು ನಂಬಿಕೊಂಡು ನೈಸರ್ಗಿಕ ವಿಕೋಪ ಮತ್ತು ಬೆಳೆ ಹಾನಿಯಿಂದ ನಷ್ಟ ಅನುಭವಿಸುವ ಬದಲು ಉಪ ಬೆಳೆಗಳಿಗೂ ಅದ್ಯತೆ ನೀಡಬೇಕು ಎಂದು ಹೇಳುತ್ತಾರೆ. ಗರ್ವಾಲೆ ಗ್ರಾಮದ ಮಣ್ಣಿನ ಮಗ ನಾಪಂಡ ಪೂವಯ್ಯ ಆ ಸಾಧಕ ರೈತ. ಅವರು ಶಾಲೆಯಲ್ಲಿ ಕಲಿತದ್ದು ಪಿಯುಸಿವರೆಗೆ ಮಾತ್ರ. ಆದರೆ ಕೃಷಿಯಲ್ಲಿ ಪರಿಣತಿ ಸಾಧಿಸಿದ್ದಾರೆ. ಅತಿವೃಷ್ಟಿ ಮತ್ತು ಕಟ್ಟೆರೋಗದಿಂದ ಜಿಲ್ಲೆಯಲ್ಲಿ ಏಲಕ್ಕಿ ಕೃಷಿ ನೆಲ ಕಚ್ಚಿತ್ತು. ಆಗ ಗರ್ವಾಲೆ ಗ್ರಾಮದಲ್ಲಿ ಏಲಕ್ಕಿ ಬೆಳೆದು ಯಶ ಸಾಧಿಸಿದ್ದು ಪೂವಯ್ಯ ಅವರ ಹೆಗ್ಗಳಿಕೆ.

ವಾರ್ಷಿಕ 250ರಿಂದ 300 ಇಂಚು ಮಳೆ ಬೀಳುವ ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದ ನಾಪಂಡ ಅಪ್ಪಾಜಿ, ಪೊನ್ನವ್ವ ಅವರ ಪುತ್ರ ಪೂವಯ್ಯ, ಉನ್ನತ ಶಿಕ್ಷಣದ ಗೊಡವೆಗೆ ಹೋಗದೇ ತಂದೆಯಂತೆಯೇ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಪ್ಪಾಜಿ ಉತ್ತಮ ಏಲಕ್ಕಿ ಬೆಳೆಗಾರರಾಗಿದ್ದರು. 20 ಎಕರೆ ಭೂಮಿಯಲ್ಲಿ 1,200 ಕೆ.ಜಿ. ಏಲಕ್ಕಿ ಬೆಳೆದು ಏಲಕ್ಕಿ ಕಿಂಗ್ ಎಂಬ ಬಿರುದು ಗಳಿಸಿದ್ದರು.

ಮಿಶ್ರ ಬೇಸಾಯ: ಸದ್ಯ ಪೂವಯ್ಯ ಅವರು 20 ಎಕರೆ ಭೂಮಿಯಲ್ಲಿ ಏಲಕ್ಕಿಯೊಂದಿಗೆ ಅರೆಬಿಕಾ, ಚಂದ್ರಗಿರಿ, ರೋಬಸ್ಟಾ ಕಾಫಿಯನ್ನು ಬೆಳೆಯುತ್ತಿದ್ದಾರೆ. ಮರಗಳಿಗೆ ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಿ, ಮಿಶ್ರ ಕೃಷಿಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ಪರಿಸರ ಪ್ರೇಮ: ಗರ್ವಾಲೆ ಗ್ರಾಮದಲ್ಲಿ ವಾರ್ಷಿಕವಾಗಿ ಹೆಚ್ಚು ಮಳೆ ಬೀಳುತ್ತದೆ. 2018ರಲ್ಲಿ 290 ಇಂಚು ಮಳೆ ಸುರಿದಿತ್ತು. ಆದರೂ ಛಲ ಬಿಡದೆ ಮಳೆಯ ನಡುವೆಯೂ ಏಲಕ್ಕಿ ಕೃಷಿಯಲ್ಲಿ ಪೂವಯ್ಯ ಅಮೋಘ ಸಾಧನೆ ಮಾಡಿದ್ದರು. ಕಾಡು ಮರಗಳಾದ ಕಾಡುನೇರಳೆ, ಹನಾಲ್‌ತಾರಿ, ಸಂಪಿಗೆ, ಗರಗತ್ತಿ, ಕಳಿ, ನಂದಿ, ಬೊಳಂದಿ, ಕಾಡು ಹೊನ್ನೆ, ಬೈನೆ, ಹಲಸು, ಕಾಚಂಪುಳಿ ಇತ್ಯಾದಿ ಮರಗಳ ನೆರಳಿನಲ್ಲಿ ಏಲಕ್ಕಿಯನ್ನು ಬೆಳೆಯುವುದರೊಂದಿಗೆ ಮರಗಳನ್ನು ಉಳಿಸಿ ಪರಿಸರ ಪ್ರೇಮವನ್ನೂ ಪೂವಯ್ಯ ತೋರಿಸಿಕೊಟ್ಟಿದ್ದಾರೆ.

ಕಡಿದಾದ ಬೆಟ್ಟದ ಜಾಗದ ಸದ್ಬಳಕೆ: ವಿದ್ಯುತ್ ಮತ್ತು ಪಂಪ್‌ಸೆಟ್ ಇಲ್ಲದೇ ಸಹಜವಾಗಿ ಹರಿಯುವ ನೀರನ್ನೇ ಏಲಕ್ಕಿಗೆ ಬಳಸಿರುವುದು ಪೂವಯ್ಯ ಅವರ ವಿಶೇಷ. ಕಡಿದಾದ ಬೆಟ್ಟದ ಜಾಗದಲ್ಲೂ ಏಲಕ್ಕಿ ಬೆಳೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಮಂಜ್ರಾಬಾದ್, ಕ್ಲೋನ್ 37 ಏಲಕ್ಕಿಯನ್ನು ಇಲ್ಲಿನವರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ನೆಲ್ಯಾಣಿಯನ್ನು ಹೆಚ್ಚು ಬೆಳೆಸಿದವರಿಲ್ಲ. ನೆಲ್ಯಾಣಿ ಗ್ರೀನ್‌ಗೋಲ್ಡ್ ತಳಿಯನ್ನು ಬೆಳೆಸಿದ ಪೂವಯ್ಯ, ಅಧಿಕ ಇಳುವರಿ ಪಡೆದುಕೊಂಡಿದ್ದಾರೆ. ಮರಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಮಿಶ್ರ ಬೆಳೆಯನ್ನೂ ಬೆಳೆದಿದ್ದಾರೆ. ಹವಾಮಾನಕ್ಕೆ ಅನುಗುಣವಾಗಿ ಮೂಲ ಬೆಳೆಗಳ ಬೆಳವಣಿಗೆಯು ಫಸಲಿಗೆ ಅಡಚಣೆಯಾಗದಂತೆ ಇತರ ಬೆಳೆಗಳನ್ನೂ ಬೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net