

ಮಂಗಳೂರು: ಖಾಸಗಿ ಬಸ್ಸಿನ ಬಾಗಿಲಿನಲ್ಲಿ ನಿಂತಿದ್ದ ಬಸ್ ಕಂಡಕ್ಟರ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಗರದ ನಂತೂರು ವೃತ್ತದಲ್ಲಿ ಮಂಗಳವಾರ ನಡೆದಿದೆ.
ಮಂಗಳವಾರ ಮಧ್ಯಾಹ್ನ 15 ನಂಬರಿನ ಬಸ್ ಕದ್ರಿ ಕೆಪಿಟಿಯಿಂದ ಬಂದು ನಂತೂರು ವೃತ್ತದಲ್ಲಿ ಮಲ್ಲಿಕಟ್ಟೆ ಕಡೆಗೆ ಸಾಗಲು ವೇಗವಾಗಿ ತಿರುವು ಪಡೆದಿದ್ದು, ಎದುರಿನ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಕೆಳಕ್ಕೆ ಎಸೆಯಲ್ಪಟ್ಟಿದ್ದಾನೆ. ಬಸ್ ನಿರ್ವಾಹಕನಾಗಿದ್ದ ಮೂಲತಃ ಬಾಗಲಕೋಟ ಜಿಲ್ಲೆಯ ನಿವಾಸಿ, ಸದ್ಯ ಸುರತ್ಕಲ್ ತಡಂಬೈಲ್ ನಲ್ಲಿ ವಾಸವಿದ್ದ ಈರಯ್ಯ (23) ನೇರವಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದು ಕೂಡಲೇ ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಆಟೋ ರಿಕ್ಷಾದಲ್ಲಿ ಕರೆದೊಯ್ದು ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ರಾತ್ರಿ 8 ಗಂಟೆ ಸುಮಾರಿಗೆ ಯುವಕ ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬಸ್ ವೇಗವಾಗಿ ಚಲಿಸಿದ್ದರಿಂದಲೇ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಲೆಕ್ಷನ್ ಮಾಡುವ ಮತ್ತು ಟೈಮ್ ಕೀಪಿಂಗ್ ಭರದಲ್ಲಿ ನಗರದ ಖಾಸಗಿ ಬಸ್ ಚಾಲಕರು ಅಜಾಗರುಕತೆಯಿಂದ ಚಾಲನೆ ಮಾಡುತ್ತಿದ್ದು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಅಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಂತಹ ಘಟನೆ ಆಗಾಗ ಮರುಕಳಿಸುತ್ತಿದ್ದು, ಸಂಬಂಧಪಟ್ಟವರು ಬಸ್ ಚಾಲಕ, ನಿರ್ವಾಹಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.