

ಹರೀಶ್ ಮೋಟುಕಾನ
ಮಂಗಳೂರು: ಅತ್ಯಂತ ಅವೈಜ್ಞಾನಿಕವಾಗಿರುವ ನಂತೂರು ವೃತ್ತದಲ್ಲಿ ಅಪಘಾತ, ಅಮಾಯಕರ ಬಲಿ ಸಾಮಾನ್ಯವಾಗಿದೆ. ಇಲ್ಲಿ ಓವರ್ ಪಾಸ್ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕೆಲಸ ಮಾಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷೃದಿಂದ ವರ್ಷಕ್ಕೆ ಹತ್ತಾರು ಮಂದಿ ಇಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮೂರು ಪಟ್ಟು ಮಂದಿ ಗಾಯಗೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಇನ್ನೆಷ್ಟು ಜೀವ ಬಲಿಯಾಗಬೇಕು? ಎನ್ನುವ ಪ್ರಶ್ನೆ ಉದ್ಭವಿಸಿದೆ.
ನಗರದಲ್ಲಿ ಇಷ್ಟೊಂದು ರಸ್ತೆಗಳು ಸೇರುವ ಸ್ಥಳ ಬೇರಾವುದೂ ಇಲ್ಲ. ಎರಡು ರಾಷ್ಟ್ರೀಯ ಹೆದ್ದಾರಿ ಇಲ್ಲೇ ಹಾದು ಹೋಗುತ್ತಿದೆ. ಇದು ನಾಲ್ಕು ರಸ್ತೆಗಳ ಸಂಗಮ. ಈ ಸರ್ಕಲ್ ದಾಟಿ ಆರು ಕಡೆಗೆ ವಾಹನಗಳು ಹಾದು ಹೋಗುತ್ತಿವೆ. ಒಮ್ಮೆ ಸಿಗ್ನಲ್ ವ್ಯವಸ್ಥೆ ಅಳವಡಿಸಿದರೂ, ಅದು ಕಾರ್ಯಾಚರಿಸಲಿಲ್ಲ. ನಿತ್ಯವೂ ಗಂಟೆಗಟ್ಟಲೆ ವಾಹನ ದಟ್ಟಣೆ, ಅಪಘಾತ ಸಾಮಾನ್ಯ. ಇಲ್ಲಿ ಕೆಲಸ ಮಾಡುವ ಸಂಚಾರಿ ಪೊಲೀಸರು ವಾಹನಗಳನ್ನು ನಿಯಂತ್ರಿಸಲು ಹರಸಾಹಸ ಪಡುವ ದುಸ್ಥಿತಿ. ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಕುಳಿತಿದ್ದಾರೆ.
ಲಕ್ಷಾಂತರ ವಾಹನಗಳು ಸಾಗುವ ರಸ್ತೆ
ಮಲ್ಲಿಕಟ್ಟೆ, ಪಂಪ್‌ವೆಲ್, ಬಿಕರ್ನಕಟ್ಟೆ ಹಾಗೂ ಕೆಪಿಟಿಯಿಂದ ಬರುವ ರಸ್ತೆಗಳು ನಂತೂರಿನಲ್ಲಿ ಸೇರುತ್ತವೆ. ಇಲ್ಲಿ ದಿನನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಪಂಪ್‌ವೆಲ್ ಕಡೆಯಿಂದ ಬರುವ ವಾಹನಗಳು ಮಲ್ಲಿಕಟ್ಟೆಯಿಂದ ಬರುವ ರಸ್ತೆಗೆ ಸೇರಿ ಸಾಗಬೇಕು. ಕೆಪಿಟಿ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಪ್ರವೇಶಿಸುವ ವಾಹನಗಳು ಇದೇ ರಸ್ತೆಯಲ್ಲಿ ಎದುರಿನಿಂದ ಬರುತ್ತವೆ. ಬಿಕರ್ನಕಟ್ಟೆಯಿಂದ ನಗರಕ್ಕೆ ಬರುವ ವಾಹನಗಳು ಏಕಾಏಕಿ ನುಗ್ಗುತ್ತವೆ. ಇತ್ತ ಪಂಪ್‌ವೆಲ್ ಕಡೆಯಿಂದ ಬರುವ ವಾಹನಗಳು ಇಲ್ಲೇ ನುಗ್ಗುತ್ತವೆ. ನಗರದಿಂದ ಬಿಕರ್ನಕಟ್ಟೆಗೆ, ಪಂಪ್‌ವೆಲ್ ಕಡೆಗೆ ಹೋಗುವ ವಾಹನಗಳು ಇಲ್ಲೇ ಸಾಗಬೇಕು. ವಾಹನ ಚಾಲಕರು ಒಂದಷ್ಟು ಎಚ್ಚರ ತಪ್ಪಿದರೆ, ಅಪಘಾತ ಕಟ್ಟಿಟ್ಟ ಬುತ್ತಿ. ವೃತ್ತ ಇಳಿಜಾರು ಪ್ರದೇಶದಲ್ಲಿರುವುದರಿಂದ ವಾಹನ ಚಾಲಕರನ್ನು ಗೊಂದಲಕ್ಕೀಡು ಮಾಡುತ್ತಿರುವುದಂತೂ ಸತ್ಯ.
500 ಮೀ. ದೂರದಲ್ಲಿದೆ ಕಚೇರಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ನಂತೂರು ವೃತ್ತದಿಂದ ಕೇವಲ 500 ಮೀ. ದೂರದಲ್ಲಿದೆ. ವೃತ್ತದಲ್ಲಿ ಸಾರ್ವಜನಿಕರು, ಪೊಲೀಸರು ಪಡುವ ಬವಣೆ ಅಧಿಕಾರಿಗಳಿಗೆ ಗಂಭೀರವಾಗಿ ಕಂಡಿಲ್ಲ. ಝೀರೋ ಟ್ರಾಫಿಕ್, ಪೊಲೀಸ್ ಬೆಂಗಾವಲಿನೊಂದಿಗೆ ಸಾಗುವ ಸಚಿವರು, ಸಂಸದರಿಗೆ ಇಲ್ಲಿನ ಕಷ್ಟ ಅರಿವಿಗೆ ಬರುತ್ತಿಲ್ಲ. ಬಂದಿದ್ದರೆ ದಿವ್ಯ ನಿರ್ಲಕ್ಷೃವೆ ಹೊರತು ಇನ್ನೇನು ಅಲ್ಲ. ಗೊಂದಲದ ಸರ್ಕಲ್ ಆಗಿದ್ದರೂ ಸೀಮಿತ ಸಂಖ್ಯೆಯ ಟ್ರಾಫಿಕ್ ಸಿಬ್ಬಂದಿ ಕಾರ್ಯಾಚರಿಸುತ್ತಿರುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಪೊಲೀಸರು ಇರುವುದಿಲ್ಲ. ಹಾಗಾಗಿ ಬೆಳಗ್ಗಿನ ವೇಳೆ ಹೆಚ್ಚಿನ ಅಪಘಾತಗಳು ಇಲ್ಲಿ ನಡೆದಿವೆ.
ದಶಕದಲ್ಲಿ 16 ಸಾವು
2013ರಿಂದ 2023ರ ತನಕ ನಂತೂರು ವೃತ್ತದಲ್ಲಿ ನಡೆದ ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. 80 ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 2014ರಲ್ಲಿ ಲಾರಿ -ಬಸ್ ನಡುವಿನ ಅಪಘಾತದಲ್ಲಿ ಕೆಪಿಟಿ ವಿದ್ಯಾರ್ಥಿ ಉಮಾನಾಥ ಮತ್ತು ಬಸ್ ಕ್ಲೀನರ್ ಗಣೇಶ್ ಮೃತಪಟ್ಟಿದ್ದರು. 2015 ಫೆ.27ರಂದು ನಡೆದ ಲಾರಿ, ಕಾರು, ಬೈಕ್ ಸರಣಿ ಅಪಘಾತದಲ್ಲಿ ಪಣಂಬೂರು ಶಾಲಾ ಶಿಕ್ಷಕಿ ವೀಣಾ, ಇವರ ಪುತ್ರ ನಿತಿನ್ ಹಾಗೂ ಬೈಕ್ ಸವಾರ ಪ್ರೀತಂ ಪಿಂಟೊ ಮೃತಪಟ್ಟಿದ್ದರು. ಮೂವರು ಗಂಭೀರ ಗಾಯಗೊಂಡಿದ್ದರು. 2016ರಲ್ಲಿ ಸೇಂಟ್ ಆಗ್ನೆಸ್ ಕಾಲೇಜು ಉಪನ್ಯಾಸಕಿ ಜೋಯ್ಲಿನ್ ಲೋಬೊ ಬಸ್‌ನಡಿ ಬಿದ್ದು ಮೃತಪಟ್ಟಿದ್ದರು. 2017ರಲ್ಲಿ ನಗರದ ಕಾಲೇಜೊಂದರ ವಿದ್ಯಾರ್ಥಿನಿ ಬಿಂದು, 2021ರಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಮಾನಸ ರಮಾನಾಥ ಹಿಟ್ ಆ್ಯಂಡ್ ರನ್ ಆಗಿ, 2022ರಲ್ಲಿ ಬಸ್ ಹಿಂದಿನಿಂದ ಡಿಕ್ಕಿಯಾಗಿ ಸ್ಕೂಟರ್ ಸವಾರ ವಿಶ್ವನಾಥ ಆಳ್ವ ಎಂಬವರು ಮೃತಪಟ್ಟಿದ್ದರು. ಶನಿವಾರ ಮತ್ತೆ ಇಬ್ಬರು ಬಲಿಯಾಗಿರುವುದು ದುರಂತ. ನಂತೂರು ವೃತ್ತದಲ್ಲಿ ಓವರ್‌ಪಾಸ್ ನಿರ್ಮಾಣಕ್ಕೆ ಕೇಂದ್ರ ಭೂ ಸಾರಿಗೆ ಸಚಿವಾಲಯದಿಂದ ಅನುಮೋದನೆ ಲಭಿಸಿ, ಟೆಂಡರ್ ಕೂಡ ಆಗಿದೆ. ಕಂಪೆನಿಯವರು ಒಪ್ಪಂದ ಪತ್ರ ನೀಡಬೇಕಾಗಿದೆ. ಈ ಪ್ರಕ್ರಿಯೆ ನಡೆದು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಆದರೆ ಅಷ್ಟರಲ್ಲಿ ಮಳೆಗಾಲ ಆರಂಭವಾದರೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.
ಲಿಂಗೇ ಗೌಡ
ಯೋಜನಾ ನಿರ್ದೇಶಕ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ನಂತೂರು ವೃತ್ತದಲ್ಲಿ ಅಪಘಾತ ಸಂಭವಿಸಿ ನಿರಂತರ ಅಮಾಯಕ ಜೀವ ಬಲಿಯಾಗುತ್ತಿರುವ ಅರಿವಿದ್ದರೂ, ಅದರ ನಿವಾರಣೆಗೆ ಬೇಕಾದ ಕ್ರಮ ಕೈಗೊಳ್ಳದಿರುವುದು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ವಾಹನಗಳು ಹೆಚ್ಚಾಗುತ್ತಿರುವುದರಿಂದ ಅಲ್ಲಿ ಓವರ್‌ಪಾಸ್ ನಿರ್ಮಾಣ ಮಾಡಲು ದಶಕದಿಂದ ಒತ್ತಾಯ ಮಾಡಲಾಗುತ್ತಿದೆ. ಆದರೆ ಇದುವರೆಗೆ ಸಮರ್ಪಕ ಸ್ಪಂದನೆ ದೊರಕಿಲ್ಲ.
ಗೋಪಾಲಕೃಷ್ಣ ಭಟ್
ಸಾಮಾಜಿಕ ಕಾರ್ಯಕರ್ತರು