

ಮಂಗಳೂರು: ನಂತೂರು ಶ್ರೀ ಭಾರತೀ ಕಾಲೇಜು ಆವರಣದ ಶಂಕರ ಶ್ರೀ ಸಭಾಂಗಣದಲ್ಲಿ ಒಂದು ತಿಂಗಳ ಕಾಲ ನಡೆದ ಶ್ರೀ ಶಂಕರ ವೇದಪಾಠ ಶಿಬಿರದ ಸಮಾರೋಪ ಸಮಾರಂಭ ಭಾನುವಾರ ನೆರವೇರಿತು.
ಹವ್ಯಕ ಮಹಾಮಂಡಲದ ವೈದಿಕ ಪ್ರಧಾನ ರಾಮಕೃಷ್ಣ ಭಟ್ ಕೂಟೇಲು ಮುಖ್ಯ ಅತಿಥಿಯಾಗಿದ್ದರು. ನಗರದಲ್ಲಿ ವಿಪ್ರವಟುಗಳಿಗೆ ವೇದಾಧ್ಯಯನ ಕಲಿಯುವ ಅವಕಾಶ ಮಾಡಿದ್ದು ಉತ್ತಮ ಕಾರ್ಯ, ಇದರಲ್ಲಿ ಮೂರು ವರ್ಷವೂ ಕಲಿಯಬೇಕು. ಆಸಕ್ತರು ಮಾತ್ರ ಬಂದಿರುವುದು ಉತ್ತಮ. ಇಲ್ಲಿ ಕಲಿತ ವಿಚಾರಗಳನ್ನು ಮುಂದೆಯೂ ನಿತ್ಯ ಬದುಕಿನಲ್ಲಿ ಅನುಷ್ಠಾನಿಸಿಕೊಂಡು ಹೋದರೆ ಸಂಸ್ಕಾರಯುತ ಬದುಕು ನಮ್ಮದಾಗಲಿದೆ ಎಂದರು.
ಹವ್ಯಕ ಮಹಾಸಭಾ ಉಪಾಧ್ಯಕ್ಷೆ ಸುಮಾ ರಮೇಶ್ ಅಧ್ಯಕ್ಷತೆ ವಹಿಸಿ, ಕಳೆದ ಒಂದು ತಿಂಗಳಲ್ಲಿ ಅತ್ಯಂತ ಯಶಸ್ವಿಯಾಗಿ ವಸಂತ ವೇದಪಾಠ ಶಿಬಿರ ನಡೆದಿದೆ, ವೈದಿಕ ಪ್ರಧಾನ ಅಮೈ ಶಿವಪ್ರಸಾದರ ಅಧ್ಯಾಪಕತ್ವದಲ್ಲಿ ನಡೆದಿರುವ ಶಿಬಿರದಲ್ಲಿ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಲಭ್ಯವಾಗಿದ್ದು ಉತ್ತಮ ವಿಚಾರ ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಕೇಂದ್ರ ಸಮಿತಿಯ ಉಪಾಧ್ಯಕ್ಷ ಗಣೇಶ್‌ಮೋಹನ್ ಕಾಶಿಮಠ, ವೇದಪಾಠ ಶಾಲೆ ಸಮಿತಿಯ ಸಂಚಾಲಕ ಕಾಶಿಮಠ ಸುಬ್ರಹ್ಮಣ್ಯ ಭಟ್, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ದ.ಕ ಹವ್ಯಕ ಮಹಾಜನ ಸಭಾ ಅಧ್ಯಕ್ಷ ನಿಡುಗಳ ಕೃಷ್ಣ ಭಟ್, ಶ್ರೀ ಭಾರತಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಶಾಸ್ತ್ರಿ ಕಲ್ಲಾಜೆ, ರುದ್ರ ಸಮಿತಿಯ ಶ್ರೀಕೃಷ್ಣಭಟ್ ಪಯ ಉಪಸ್ಥಿತರಿದ್ದರು.
ವೇದಪಾಠ ಶಾಲೆಯನ್ನು ನಿರ್ವಹಿಸಿ ವೈದಿಕ ಪ್ರಧಾನ ಶಿವಪ್ರಸಾದ್ ಅಮೈ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವೇದಪಾಠ ಸಮಿತಿ ಸಂಚಾಲಕ ಬಾಲಸುಬ್ರಹ್ಮಣ್ಯ ಭಟ್ ಕಬೆಕೋಡಿ ಪ್ರಸ್ತಾವಿಸಿದರು. ಬಾಲಕೃಷ್ಣ ಭಟ್ ಬಾಯಾಡಿ ನಿರೂಪಿಸಿ ವಂದಿಸಿದರು.