ನಂತೂರು ವೃತ್ತದಲ್ಲಿ ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ ಇಬ್ಬರು ದುರ್ಮರಣ

Mng-mar18-accident2
Published on

ಮಂಗಳೂರು: ನಗರದ ಅವೈಜ್ಞಾನಿಕ ಮತ್ತು ಅಪಾಯಕಾರಿ ನಂತೂರು ವೃತ್ತದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಮತ್ತೆರಡು ಮಂದಿ ಮೃತಪಟ್ಟಿದ್ದಾರೆ.
ಸಿಗ್ನಲ್‌ಗೆ ಕಾಯುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಸುತ್ತಾನ್‌ಬತ್ತೇರಿ ನಿವಾಸಿ ಸಾಮ್ಯುವೆಲ್ ಜೇಸುದಾಸ್(66) ಹಾಗೂ ಅವರ ಸೊಸೆಯ ದೊಡ್ಡಮ್ಮನ ಮಗಳು ತೊಕ್ಕೊಟ್ಟು ನಿವಾಸಿ ಭೂಮಿಕಾ (17) ಟಿಪ್ಪರ್ ಅಡಿಗೆ ಬಿದ್ದು ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಘಟನೆ ವಿವರ: ಸಾಮ್ಯುವೆಲ್ ಜೇಸುದಾಸ್ ಅವರು ಸಂಬಂಧಿಕರ ಮನೆ ತೊಕ್ಕೊಟ್ಟಿಗೆ ಹೋಗಿದ್ದು, ಬರುವಾಗ ಸೈಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿನಿಯಾಗಿರುವ ಭೂಮಿಕಾ ಸ್ಕೂಟರ್‌ನಲ್ಲಿ ಸಹಸವಾರೆಯಾಗಿ ಬಂದಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ನಂತೂರು ವೃತ್ತ ಬಳಿ ಸ್ಕೂಟರ್ ಸಿಗ್ನಲ್‌ಗೆ ಕಾಯುತ್ತಿದ್ದಾಗ ಪಂಪ್‌ವೆಲ್ ಕಡೆಯಿಂದ ಚಾಲಕ ಸತೀಶ್ ಗೌಡ ಪಾಟೀಲ್ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಟಿಪ್ಪರ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಟಿಪ್ಪರ್ ಚಕ್ರ ಸವಾರರ ಮೇಲೆ ಚಲಿಸಿದ ಪರಿಣಾಮ ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕನಿಗೆ ಥಳಿತ: ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಚಾಲಕನನ್ನು ಟಿಪ್ಪರ್‌ನಿಂದ ಎಳೆದು ಯದ್ವಾತದ್ವಾ ಥಳಿಸಿದ್ದಾರೆ, ಅಲ್ಲದೆ ಟಿಪ್ಪರ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ವಲ್ಪ ಹೊತ್ತು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮಂಗಳೂರು ಪೂರ್ವ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಟಿಪ್ಪರ್ ಚಾಲಕ ಸತೀಶ್ ಗೌಡ ಪಾಟೀಲ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಪ್ಪರ್ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷೃದಿಂದ ವಾಹನ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಟಿಪ್ಪರ್ ಸ್ಥಳೀಯ ವ್ಯಕ್ತಿಯದ್ದಾಗಿದ್ದು, ಚಾಲಕ ಉತ್ತರ ಕರ್ನಾಟಕ ಮೂಲದವನಾಗಿದ್ದಾನೆ.
ಅಪಘಾತದ ಕಾರಣ ನಂತೂರು ಜಂಕ್ಷನ್ ಸೇರಿದಂತೆ ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿದೆ. ಇದರಿಂದ ಸಂಚಾರ ದಟ್ಟಣೆ ತೆರವಿಗೆ ಪೊಲೀಸರು ಹರಸಾಹಸ ಪಡಬೇಕಾಯಿತು. ವಾರಾಂತ್ಯವಾದ ಕಾರಣ ವಾಹನಗಳ ದಟ್ಟಣೆಯೂ ಅಧಿಕವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net