ನಾನೂ ಎಂಎಲ್‌ಸಿ ಟಿಕೆಟ್ ಆಕಾಂಕ್ಷಿ: ಆಯನೂರು ಪುನರುಚ್ಚಾರ

6sgr1
Published on

ಸಾಗರ: ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇರಿಸಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು.

ಕಾಂಗ್ರೆಸ್ ನನಗೆ ಅವಕಾಶ ಕೊಡುತ್ತದೆ ಎನ್ನುವ ವಿಶ್ವಾಸವಿದೆ. ಎಲ್ಲ ಕಡೆಯೂ ಪ್ರವಾಸ ಮಾಡುವ ಮೂಲಕ ಮತಯಾಚನೆ ನಡೆಸುತ್ತಿದ್ದೇನೆ. ಶೀಘ್ರ ಅಭ್ಯರ್ಥಿಗಳ ಘೋಷಣೆ ಮಾಡುವಂತೆ ಒತ್ತಾಯ ಎಲ್ಲೆಡೆ ಕೇಳಿಬರುತ್ತಿದೆ. ಪ್ರಸ್ತುತ ಕಾಂಗ್ರೆಸ್ ಪರವಾದ ವಾತಾವರಣ ಇದೆ. ನೈಋತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದರಿಂದ ದುಡಿಯುವ ವರ್ಗಕ್ಕೆ ಅನ್ಯಾಯವಾಗಿದೆ. ಈ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದ್ದು, ಇದನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದರು.
ಕೇಂದ್ರ ಸರ್ಕಾರದಿಂದ ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಬರದ ಪರಿಸ್ಥಿತಿಯಲ್ಲೂ ನಮಗೆ ಕೇಂದ್ರ ಬಿಡಿಗಾಸು ಬಿಡುಗಡೆ ಮಾಡಿಲ್ಲ. 18,177 ಕೋಟಿ ರೂ.ಗೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಬಿಡುಗಡೆ ಮಾಡುತ್ತೇವೆಂದು ಘೋಷಿಸಿದವರು ಐದು ರೂ. ಕೂಡ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ತೆರಿಗೆ ಪಾವತಿಯಲ್ಲಿ ರಾಜ್ಯಕ್ಕೆ ಬಿಡುಗಡೆ ಆಗಬೇಕಾದ ಹಣದಲ್ಲಿ ಕಳೆದ ಐದು ವರ್ಷಗಳಲ್ಲಿ 62,098 ಕೋಟಿ ರೂ. ನಷ್ಟವಾಗಿದೆ. ಫೆ.7ರಂದು ಸಿಎಂ, ಡಿಸಿಎಂ, ಸಚಿವರು ಸೇರಿದಂತೆ ರಾಜ್ಯದ 136 ಕಾಂಗ್ರೆಸ್ ಶಾಸಕರು, ಕೇಂದ್ರ ಸರ್ಕಾರದ ನಡೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿಯವರು ವ್ಯವಸ್ಥಿತವಾದ ವಿರೋಧ ಪಕ್ಷವಾಗಿ ಕೆಲಸ ಮಾಡದೆ ಜನರ ಭಾವನೆಗಳನ್ನು ಕೆರಳಿಸಿ ಬಾವುಟ ಫೋಟೋ ಹಿಡಿದು ಗಲಭೆ ಮಾಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಲೋಕಸಭೆಯಲ್ಲಿ ವಂಶಪಾರಂಪರ್ಯ ಆಡಳಿತದ ವಿರುದ್ಧ ಮಾತನಾಡಿದ್ದಾರೆ. ಇದಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಲಿ ಎಂದು ಟಾಂಗ್ ಕೊಟ್ಟರು.
ಪ್ರಮುಖರಾದ ಬಿ.ಆರ್.ಜಯಂತ್, ಮಲ್ಲಿಕಾರ್ಜುನ ಹಕ್ರೆ, ಐ.ಎನ್.ಸುರೇಶಬಾಬು, ಮಂಡಗಳಲೆ ಗಣಪತಿ, ಚೇತನರಾಜ್ ಕಣ್ಣೂರು, ವೈ.ಎಚ್.ನಾಗರಾಜ್, ಡಿ.ದಿನೇಶ್, ಗಿರೀಶ್ ಕೋವಿ, ಸೂರ್ಯನಾರಾಯಣ ಖಂಡಿಕಾ, ತಾರಾಮೂರ್ತಿ, ಮಹಾಬಲ ಕೌತಿ, ಸುರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net