ರೈತರಿಗಾಗಿ ಜೀವನ ಮುಡಿಪಿಟ್ಟ ನಂಜುಂಡಸ್ವಾಮಿ: ‘ಡೈರೆಕ್ಟ್ ಆಕ್ಷನ್’ ನಾಟಕ ಪ್ರದರ್ಶನ

Direct Action Drama
Published on

ಬ್ಯಾಡಗಿ: ಸರ್ಕಾರಗಳನ್ನು ನಡುಗಿಸುವ ತಾಕತ್ತು ರೈತ ಸಂಘಟನೆಗಿದ್ದು, ನಮ್ಮ ಹಕ್ಕುಗಳನ್ನು ಪಡೆಯಲು ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ. ರೈತ ಕಣ್ಮಣಿ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ನಿಲುವುಗಳು ಭವಿಷ್ಯದಲ್ಲಿ ಸತ್ಯವಾಗಲಿವೆ ಎಂದು ರೈತ ಮುಖಂಡ ರಾಕೇಶ ಟಿಕಾಯತ್ ಹೇಳಿದರು.

ತಾಲೂಕಿನ ಕಾಗಿನೆಲೆ ಕನಕದಾಸ ಕಲಾಭವನದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಜೀವನ ಚರಿತ್ರೆ ಆಧಾರಿತ ‘ಡೈರೆಕ್ಟ್ ಆಕ್ಷನ್’ ನಾಟಕ ಪ್ರದರ್ಶನದಲ್ಲಿ ಭಾನುವಾರ ಮಾತನಾಡಿದರು.

ವಿಶ್ವಚೇತನ ಪ್ರೊ. ನಂಜುಂಡಸ್ವಾಮಿ ರೈತ ಹೋರಾಟಕ್ಕೆ ಚಾಲನೆ ನೀಡಿದ್ದು, ಬಳಿಕ ಹಕ್ಕುಗಳನ್ನು ಪಡೆಯಲೇಬೇಕೆಂದು ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಭವಿಷ್ಯದಲ್ಲಿ ರೈತರು ದೊಡ್ಡ ಸವಾಲುಗಳನ್ನು ಎದುರಿಸಬೇಕಿದೆ. ಆ ನಿಟ್ಟಿನಲ್ಲಿ ಗಟ್ಟಿಧ್ವನಿ ಮಾಡದಿದ್ದಲ್ಲಿ ನ್ಯಾಯ ಸಿಗುವುದಿಲ್ಲವೆಂದು ಖಚಿತ ನಿಲುವು ಹೊಂದಿದ್ದರು. ಅವರ ಆಳವಾದ ರೈತಪರ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ. ರೈತನಿಗೆ ಬೆಲೆ ಕುಸಿತದಿಂದ ಧೃತಿಗೆಡುವ ಸಂದರ್ಭ ಬಂದಾಗ ಸರ್ಕಾರಗಳ ಪಾತ್ರವೇನು? ಎನ್ನುವ ಕುರಿತು ಎರಡು ದಶಕಗಳ ಹಿಂದೆಯೇ ಹೋರಾಟ ಆರಂಭಿಸಿದ್ದರು. ಭವಿಷ್ಯದಲ್ಲಿ ವಿಷಕಾರಿ ಬೀಜಗಳನ್ನು ಪೂರೈಸುವ ವಿದೇಶಿ ಬೀಜ ಕಂಪನಿಗಳು ರೈತರನ್ನು ಸದ್ದಿಲ್ಲದೆ ಕೊಲ್ಲಲಿವೆ. ಇದಕ್ಕೆ ಪರಿಹಾರ ಹುಡುಕಲು ಈಗಲೇ ರೈತರಿಗೆ ಜಾಗೃತಿ ಮುಟ್ಟಿಸೋಣ ಎಂದು ಪಣತೊಟ್ಟದ್ದರು. ರಾಜೀಸೂತ್ರಗಳಿಗೆ ಒಪ್ಪದ ಅವರು, ಧ್ಯೇಯಗಳಿಗೆ ಮನ್ನಣೆ ನೀಡಿದ ರೈತಚೇತನ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜನಪ್ರತಿನಿಧಿಗಳಿಗೆ ನಡುಕು ಹುಟ್ಟಿಸುವ ಮೂಲಕ ಹೋರಾಟದ ಶಕ್ತಿಯನ್ನು ಹಿಂದಿನ ರೈತ ನಾಯಕರು ತೋರಿದ್ದಾರೆ. ನಾವೆಲ್ಲ ಅವರು ಹಾಕಿದ ಹೋರಾಟದ ರೂಪುರೇಷೆಗಳನ್ನು ಮುನ್ನಡೆಸುವ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಿದೆ. ನಾವು ಬೀದಿಗಿಳಿದಾಗ ಮಾತ್ರ ಸರ್ಕಾರದ ಕಣ್ತೆರೆಸಲು ಸಾಧ್ಯ. ಇದಕ್ಕೆ ರೈತರು ಸಂಘಟನೆಯಾಗಬೇಕಿದೆ ಎಂದರು.

ಸಾಹಿತಿ ಡಾ.ನಟರಾಜ ಹುಳಿಯಾರ, ನಿರ್ದೇಶಕ ನರೇಂದ್ರ ಬಾಬು, ನಟ ಸಂಪತ್ ಮೈತ್ರೇಯ, ಚುಕ್ಕಿ ನಂಜುಂಡಸ್ವಾಮಿ, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಣ್ಣ ಎಲಿ, ಜಾನ್ ಪುನೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net