ಕನ್ನಡಿಗರ ಧ್ವನಿ ಅಡಗಿಸುವ ಯತ್ನ: ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಆಕ್ರೋಶ

Nanjavadhuta Swamiji supports Cauvery protest
Published on

ಮಂಡ್ಯ: ಕಾವೇರಿ ನದಿ ನೀರಿನ ವಿಚಾರವನ್ನು ನೋಡಿದರೆ ಕನ್ನಡಿಗರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಹೋರಾಟದ ಅಂಗವಾಗಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಸರ್‌ಎಂವಿ ಪ್ರತಿಮೆವರೆಗೆ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಈ ಹಿಂದೆ ಡಾ.ಜಿ.ಮಾದೇಗೌಡರ ನೇತೃತ್ವದ ಹೋರಾಟದಲ್ಲಿ ಭಾಗವಹಿಸಿದ್ದೆನು. ನನ್ನ ಧ್ವನಿ ಸದಾ ರೈತ ಪರವಾಗಿರುತ್ತದೆ. ರಾಜ್ಯಕ್ಕೆ ಅತ್ಯಂತ ಸಂಕಷ್ಟದ ಸಂದರ್ಭ ಇದೆ. ಯಾವುದೇ ಸನ್ನಿವೇಶ ಬಂದರೂ ರೈತರ ಜತೆ ಗಟ್ಟಿಯಾಗಿ ನಿಲ್ಲುತ್ತೇನೆ. ರೈತರಿಗೆ ಈಗ ಬಹಳ ದೊಡ್ಡ ಸಂಕಷ್ಟ ಬಂದಿದೆ. ಮೇಕೆದಾಟು ಯೋಜನೆ ಮಾಡಿ 54 ಟಿಎಂಸಿ ನೀರು ಕೊಡುತ್ತೇವೆ ಎಂದಿದ್ದರು. ಆಗ ನಾವು ಕೂಡ ಹೋರಾಟ ಬೆಂಬಲಿಸಿದ್ದೇವೆ. ಆದರೀಗ ನಿರ್ಧಾರ ಮಾಡುವ ಜಾಗದಲ್ಲಿ ಕುಳಿತಿದ್ದರೂ ಸುಮ್ಮನಿದ್ದಾರೆ ಎಂದು ಬೇಸರಿಸಿದರು.
ಕಾವೇರಿ ನದಿ ನೀರು ವಿಚಾರವಾಗಿ ಸಂಕಷ್ಟದ ಸಂದಿಗ್ಧದ ಸಮಯದಲ್ಲಿ ರೈತರು ಮತ್ತು ನಾಡಿನ ಜನರ ಹಿತ ಕಾಯಲು ರಾಜ್ಯ ಸರ್ಕಾರ ಹಿಂಜರಿಕೆ ತೊರೆದು ದಿಟ್ಟ ನಿರ್ಧಾರಕ್ಕೆ ಮುಂದಾಗಬೇಕು. ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಾಗಿದೆ. ರಾಜಕೀಯವಾಗಿ ನಷ್ಟ ಆಗಲಿದೆ ಎಂಬ ಹಿಂಜರಿಕೆ ಮನೋಭಾವ ಬೇಡ. ನಿಮ್ಮ ದೃಢ ನಿರ್ಧಾರದಿಂದ ರಾಜಕೀಯ ನಷ್ಟವಾದರೆ ನಾಡಿನ ಜನತೆ ಅದನ್ನ ಭರಿಸಿಕೊಡಲಿದ್ದಾರೆ. ಜನತೆ ಯಾರ ಋಣದಲ್ಲಿಯೂ ಇರುವುದಿಲ್ಲ. ಆದ್ದರಿಂದ ಇದನ್ನ ಮನಗಂಡು ದೃಢ ನಿಲುವು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸುಗ್ರೀವಾಜ್ಞೆ ಮೂಲಕ ನಾಡಿನ ಹಿತಕ್ಕೆ ಮುಂದಾದರು. ಆಗ ಅವರನ್ನು ಜೈಲಿಗೆ ಹಾಕಲಿಲ್ಲ. ಹಾಗಾಗಿ ಯಾವುದಕ್ಕೂ ಹೆದರಬಾರದು. ರೈತರ ಹಿತರಕ್ಷಣೆ ಮುಖ್ಯ, ಸರ್ಕಾರ ಇಡುವ ದಿಟ್ಟ ಹೆಜ್ಜೆ ಮುಂದಿನ ದಿನಗಳಲ್ಲಿ ಕಾನೂನಾಗಿ ಪರಿವರ್ತನೆ ಆಗಲಿದೆ. ನಿಮ್ಮ ಹಿಂಜರಿಕೆ ಕೋಟ್ಯಂತರ ಜನರ ಬದುಕು ಮತ್ತು ಭಾವನೆಯನ್ನ ತಲ್ಲಣಗೊಳಿಸಲಿದೆ. ಜನತೆ ಅಧಿಕಾರ ಕೊಟ್ಟಿರುವುದು ಜನಸಾಮಾನ್ಯರ ಹಿತ ಕಾಪಾಡಲು ಎಂಬುದನ್ನ ಮರೆಯಬಾರದು ಎಂದು ಕಿವಿಹಿಂಡಿದರು.
ರಾಜಕೀಯ ಮಾಡುವ ಸಂದರ್ಭ ಇದಲ್ಲ. ಸಂಕಷ್ಟದ ಸಮಯದಲ್ಲಿ ರಾಜಕೀಯ ಪಕ್ಷಗಳು ರಾಜಕೀಯ ಇಚ್ಛಾ ಶಕ್ತಿ ಮತ್ತು ಸಮಗ್ರತೆ ಪ್ರದರ್ಶಿಸಬೇಕು. ಕಾವೇರಿ ವಿಚಾರವಾಗಿ ಪಕ್ಷಗಳ ನಿಲುವು ರೈತ ಪರವಾಗಿರಬೇಕು, ಒಗ್ಗಟ್ಟು ಇಲ್ಲದಿದ್ದರೆ ನ್ಯಾಯ ಪಡೆಯಲು ಆಗದು ಈಗಲೇ ಎಚ್ಚೆತ್ತುಕೊಳ್ಳಬೇಕು. ಹಿಂದೆ ಮಳೆ ಬಿದ್ದಾಗ ತಮಿಳುನಾಡಿಗೆ ಸಾಕಷ್ಟು ನೀರು ಹರಿದಿದೆ. ನೀರು ಇದ್ದು ಕೊಡಲ್ಲ ಅನ್ನಲು ನಾವೇನು ಕ್ರೂರಿಗಳಲ್ಲ. ಹಂಚಿ ತಿನ್ನುವ ನೆಲದಲ್ಲಿ ಹುಟ್ಟಿದ್ದೇವೆ. ಸ್ವಲ್ಪ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ ಎಂದೇಳಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದ್ದರೆ ಇಲ್ಲಿನ ರೈತರ ಮತ್ತು ಜನರ ಗತಿ ಏನು?. ಮತ್ತೆ ಮಳೆ ಬರುವ ಮುನ್ಸೂಚನೆ ಇಲ್ಲ. ಮುನ್ನೆಚ್ಚರಿಕೆ ವಹಿಸದಿದ್ದರೆ ಮುಂದಿನ ವರ್ಷದ ಮುಂಗಾರು ಆರಂಭವಾಗುವರೆಗೂ ಸಂಕಷ್ಟದ ದಿನಗಳು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Nanjavadhuta Swamiji supports Cauvery protest

ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ರಾಜ್ಯದ 28 ಸಂಸದರು ಸಂಸತ್‌ನೊಳಗೆ ಹೋರಾಟ ಮಾಡದಿರುವುದು ಸರಿಯಲ್ಲ. ಈಗಲಾದರೂ ಹೋರಾಟ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಇಂತಹದೇ ಸಂಕಷ್ಟದ ಸನ್ನಿವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತಾಗ ಪ್ರಧಾನಿ ಮಧ್ಯಪ್ರವೇಶ ಮಾಡಿದ್ದರು. ಇದನ್ನ ಸಂಸತ್ ಸದಸ್ಯರು ಅರಿಯಬೇಕಾಗಿದೆ. ಕಾವೇರಿ ಪ್ರಾಧಿಕಾರ, ಸಮಿತಿ ಮತ್ತು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲಿಲ್ಲ ಎಂಬುದು ನಾಡಿನ ಜನರ ಮನಸ್ಸಿನಲ್ಲಿದೆ. ರೈತರಿಗಿಂತ ತಜ್ಞರು ಬೇಕೆ?. ಅವರ ಜತೆ ವಕೀಲರು ಬೆರೆತು ನೆಲದ ಸಮಸ್ಯೆ ಹರಿಯುವಂತೆ ಮಾಡಬೇಕು. ವಾಸ್ತವ ಪರಿಸ್ಥಿತಿ ವಕೀಲರಿಗೆ ಅರ್ಥ ಆಗದಿದ್ದರೆ ಅವರಿಗೆ ಸಮರ್ಥವಾದ ಮಂಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು, ಕರ್ನಾಟಕಕ್ಕೆ ನೀರಿನ ವಿಚಾರದಲ್ಲಿ ಆಗುತ್ತಿರುವ ನಿರಂತರ ದಬ್ಬಾಳಿಕೆ ತಪ್ಪಿಸಿ ನ್ಯಾಯಯುತ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕೆರಗೋಡು ಶಾಖಾ ಮಠದ ಶಿವಾನಂದಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಕೆರೆ ಚಳವಳ್ಳಿ ರಮೇಶ್‌ಗೌಡ, ಕನ್ನಡ ಸೇನೆ ಮಂಜುನಾಥ್, ಕನ್ನಡಪರ ಸಂಘಟನೆಗಳ ಮುಖಂಡರಾದ ರೂಪೇಶ್ ರಾಜಣ್ಣ, ರಾಂಪ್ರಸಾದ್, ಗೋವಿಂದೇಗೌಡ, ರಾಜಶೇಖರ್, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net