

ಸರಗೂರು: ಹಾದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ 2022-25ರ ಅವಧಿಯಲ್ಲಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಭಾಗ್ಯ ಕೆಂಪಸಿದ್ದ ಆಯ್ಕೆಯಾದರು.
ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗ್ರಾಮದ ಹಿರಿಯರು ಹಾಗೂ ಪಾಲಕರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ನಂತರ ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ಮಾತನಾಡಿ, ಇಡೀ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಯೋಜನೆಯನ್ನು ತಯಾರಿಸುವುದು, ಶಾಲೆಯ ವಾರ್ಷಿಕ ಚಟುವಟಿಕೆಗಳ ನೀಲಿನಕ್ಷೆ ರೂಪಿಸುವುದು, ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅದನ್ನು ಅನುಪಾಲನೆ ಮಾಡುವ ಜವಾಬ್ದಾರಿ ಎಸ್‌ಡಿಎಂಸಿ ಮೇಲಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಪಾಲಕರು ಸಾಮಾನ್ಯವಾಗಿ ಬಡವರು, ದಿನವಿಡೀ ದುಡಿಯುವವರು. ಅವರಿಗೆ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ನೋಡಿ ಅದರ ಕಾಯಕಲ್ಪಕ್ಕೆ ಸಲಹೆ ನೀಡಲು ಸಾಧ್ಯವಾಗುವುದು ಕಡಿಮೆ. ಒಂದಿಬ್ಬರು ಆಸಕ್ತಿ ತೋರಿಸಿ ಅಭಿಪ್ರಾಯ ಹೇಳಿದರೆ ಅದಕ್ಕೆ ವಿರೋಧವಾಗುವುದು ಉಂಟು. ಅದರಿಂದ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಜತೆಯಲ್ಲಿ ಹೋಗುವುದರಿಂದ ಶಾಲೆಯ ಸಮಸ್ಯೆಗಳು ಬರುವುದು ಕಡಿಮೆಯಾಗುತ್ತದೆ ಎಂದರು.ನೂತನವಾಗಿ ಆಯ್ಕೆಯಾದ ಅಧ್ಯಕ್ಷ ನಂಜಪ್ಪ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನೂತನವಾಗಿ ಪದಾಧಿಕಾರಿಗಳು:ಸಮಿತಿಯ ಸದಸ್ಯರಾಗಿ ರಮೇಶ್ ಎಚ್.ಎಸ್. ಸಣ್ಣಸ್ವಾಮಿ, ಮಹದೇವಸ್ವಾಮಿ, ಶ್ರೀಧರ್, ಮಣಿಕಂಠ , ರವಿ, ಎಚ್ ಎನ್ ರೇವಣ್ಣ, ರವಿಚಂದ್ರ, ಶಿಲ್ಪಾ, ಚಂದ್ರಮ್ಮ, ಪದ್ಮಾ, ವಾಸಂತಿ, ನಾಗಮ್ಮ, ಶಾಂತಿ, ಭಾರತಿ, ಕೀರ್ತಿ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾಮದ ಯಜಮಾನರಾದ ರಾಜೇಶ್, ಪ್ರಕಾಶ್, ಸಿದ್ದರಾಜು, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ, ಶಶಿಕುಮಾರ್, ರಾಮಕೃಷ್ಣ, ಸಿದ್ದಯ್ಯ ಇತರರು ಇದ್ದರು.