

ಮೈಸೂರು: ನಂಜನಗೂಡು ಗಲಬೆ ವಿಚಾರದಲ್ಲಿ ಇದುವರೆಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡದೆ ಇರುವುದಕ್ಕೆ ದಲಿತ ಪ್ಯಾಂಥರ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ. ಕಿರಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ತಾಲೂಕು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಶ್ರೀನಿವಾಸ ಪ್ರಸಾದ್ ಘಟನೆ ಬಗ್ಗೆ ಮಾತನಾಡದೆ ಇರುವುದು ಖಂಡನೀಯ. ದಲಿತ ನಾಯಕ ಎಂದು ಬಿಂಬಿಸಿಕೊಂಡಿರುವ ಅವರು ಏತಕ್ಕೆ ಮೌನ ವಹಿಸಿದ್ದಾರೆ? ಇನ್ನಾದರೂ ಅವರು ತುಟಿಬಿಚ್ಚಿ ಮಾತನಾಡಬೇಕು, ಇಲ್ಲವಾದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಅವರು ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸೌಹಾರ್ದತೆ ಕಾಪಾಡಲು ಮುಂದಾಗಲಿಲ್ಲ. ಜನಪ್ರತಿನಿಧಿಗಳೆಲ್ಲರೂ ದಲಿತರಾದರೂ ಸಹ ದಲಿತರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂಜನಗೂಡು ಹಲ್ಲರೇ ಗ್ರಾಮದಲ್ಲಿ ರಸ್ತೆಗೆ ಅಂಬೇಡ್ಕರ್ ನಾಮಫಲಕ ಅಳವಡಿಸಲು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿತ್ತು. ಹೀಗಿದ್ದರೂ ನಾಮಫಲಕ ವಿಚಾರ ಮುಂದಿಟ್ಟುಕೊಂಡು ಗುಂಪೊಂದು ದಲಿತರ ಮೇಲೆ ಹಲ್ಲೆ ನಡೆಸಿ ರುವುದು ಖಂಡನೀಯ. ಹಲ್ಲೆ ನಡೆಸಿರುವ ಆರೋಪಿಗಳನ್ನು ಶಿಕ್ಷೆ ಗುರಿಪಡಿಸಬೇಕು, ನಿರಪರಾಧಿ ದಲಿತರ ಮೇಲೆ ಹೂಡಿರುವ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಸಂತೋಷ್ ಕುಮಾರ್, ಪ್ರಸಾದ್, ಜವರಪ್ಪ, ಸಂತೋಷ್ ಇದ್ದರು.