ನಂಜನಗೂಡು ನಗರಸಭೆ ಕೈ ವಶ

photo 1
Published on

ನಂಜನಗೂಡು: ತೀವ್ರ ಕುತೂಹಲ ಕೆರೆಳಿಸಿದ್ದ ನಂಜನಗೂಡು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದದಿಂದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಹುಮತವಿದ್ದರೂ ರಾಜಕೀಯ ತಂತ್ರಗಾರಿಕೆಯಿಂದಾಗಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದೆ. ಅಧ್ಯಕ್ಷರಾಗಿ ಕಾಂಗ್ರೆಸ್‌ನ ಶ್ರೀಕಂಠಸ್ವಾಮಿ, ಉಪಾಧ್ಯಕ್ಷರಾಗಿ ಜೆಡಿಎಸ್‌ನ ರೆಹನಾಭಾನು ಆಯ್ಕೆಯಾದರು.


31 ಸ್ಥಾನಗಳ ಬಲವಿರುವ ನಂಜನಗೂಡು ನಗರಸಭೆಗೆ ಬಿಜೆಪಿ 15 ಸ್ಥಾನ, ಕಾಂಗ್ರೇಸ್ 10 ಸ್ಥಾನ, ಜೆಡಿಎಸ್ 3 ಸ್ಥಾನ ಹಾಗೂ 3 ಸ್ಥಾನಗಳಲ್ಲಿ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷವಾಗಿರುವ ಕಾರಣ ಬಿಜೆಪಿ ಪಕ್ಷದ 15 ಸದಸ್ಯರು, ಜೆಡಿಎಸ್ ಪಕ್ಷದ 3 ಸದಸ್ಯರೊಂದಿಗೆ 18 ಸ್ಥಾನಗಳಿಂದ ಬಹುಮತವಿರುವ ಕಾರಣ ನಾವೇ ಅಧಿಕಾರ ಹಿಡಿಯುವ ಕನಸು ಕಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ರಾಜಕೀಯ ತಂತ್ರಗಾರಿಕೆಯಿಂದ ಬಿಜೆಪಿ 4 ಸದಸ್ಯರು, ಗೈರು ಹಾಜರಾಗಿ ಪಕ್ಷೇತರ 3 ಸದಸ್ಯರು ಮತ್ತು ಜೆಡಿಎಸ್ ಪಕ್ಷದ ಒಬ್ಬ ಸದಸ್ಯರ ಸಹಕಾರದಿಂದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.


ಮಂಗಳವಾರ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನ ಎಸ್ಸಿ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಶ್ರೀಕಂಠಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಚಿಹ್ನೆಯಿಂದ ಗೆದ್ದಿದ್ದ ರೆಹಾನಾಭಾನು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಪಕ್ಷದಿಂದ ಪಿ.ದೇವು, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಅನಂತ್ ನಾಮಪತ್ರ ಸಲ್ಲಿಸಿದ್ದರು.


ಕಾಂಗ್ರೇಸ್ ಪಕ್ಷದ ಶ್ರೀಕಂಠಸ್ವಾಮಿ ಹಾಗೂ ಜೆಡಿಎಸ್ ಉಪಾಧ್ಯಕ್ಷೆ ರೆಹಾನಾಭಾನು ಕಾಂಗ್ರೆಸ್‌ನ 10 ಸದಸ್ಯರು, 3 ಜನ ಪಕ್ಷೇತರ ಸದಸ್ಯರು, ಶಾಸಕ, ಸಂಸದರ ಮತಗಳು ಸೇರಿ 16 ಮತಗಳನ್ನು ಪಡೆದು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಪಿ.ದೇವು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಅನಂತ್ ಅವರಿಗೆ ಬಿಜೆಪಿಯ 11 ಮತ ಮತ್ತು ಜೆಡಿಎಸ್‌ನ 1 ಮತಗಳಿಂದ 12 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣೆಗೆ ನಾಲ್ವರು ಬಿಜೆಪಿ ಸದಸ್ಯರು ಗೈರಾದರೆ, ಜೆಡಿಎಸ್‌ನ ಒಬ್ಬರು ಚುನಾವಣೆ ಪ್ರಕ್ರಿಯೆಗೆ ಹಾಜರಾದರೂ ತಟಸ್ಥರಾಗಿ ಉಳಿದರು. ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ರಕ್ಷಿತ್ ಅವರು ಅಧ್ಯಕ್ಷರಾಗಿ ಶ್ರೀಕಂಠಸ್ವಾಮಿ, ಉಪಾಧ್ಯಕ್ಷರಾಗಿ ರೆಹಾನಾಭಾನು ಅವರ ಆಯ್ಕೆಯನ್ನು ಘೋಷಿಸಿದರು.


ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಜೈಕಾರಗಳನ್ನು ಕೂಗಿ, ಮೆರವಣಿಗೆ ನಡೆಸಿ ಸಂಭ್ರಮಾಚರಿಸಿದರು.


ಸಂಸದ ಸುನೀಲ್‌ಬೋಸ್, ಶಾಸಕ ದರ್ಶನ್‌ಧ್ರವನಾರಾಯಣ್, ಮಾಜಿ ಶಾಸಕ ಕಳಲೆಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಶ್ರೀಕಂಠನಾಯಕ, ಸಿ.ಎಂ.ಶಂಕರ್, ವಿಶ್ವಕರ್ಮ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್, ಮುಖಂಡರಾದ ಇಂಧನ್‌ಬಾಬು, ಎನ್.ಟಿ.ಗಿರೀಶ್, ಎನ್.ಎಂ.ಮಂಜುನಾಥ್, ಕಳಲೆರಾಜೇಶ್, ಸೋಮೇಶ್, ನಗರಸಭಾ ಸದಸ್ಯರಾದ ಪ್ರದೀಪ್, ಗಂಗಾಧರ್, ಎಸ್.ಪಿ.ಮಹೇಶ್, ಗಾಯತ್ರಿ, ಸಿದ್ದಿಖ್, ಶ್ವೇತಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net