ದಕ್ಷಿಣ ಕಾಶಿಯಲ್ಲಿ ಟಿಕೆಟ್‌ಗಾಗಿ ಪ್ರದಕ್ಷಿಣೆ : ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ

nanjanagudu
Published on

ಅವಿನಾಶ್ ಜೈನಹಳ್ಳಿ ಮೈಸೂರು
‘ದಕ್ಷಿಣ ಕಾಶಿ’ ಪ್ರಸಿದ್ಧಿ ಜತೆಗೆ, ‘ರಸಬಾಳೆ’ಯ ತವರೂರು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ವರ್ಷಕ್ಕೂ ಮುನ್ನವೇ ವಿಧಾನಸಭೆ ಚುನಾವಣೆಯ ಗುಂಗು ಆವರಿಸಿದ್ದು, ವಿವಿಧ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ.


2023ರ ಚುನಾವಣೆಗೆ ಕೆಲವು ಆಕಾಂಕ್ಷಿಗಳಿದ್ದರೂ ಬಿಜೆಪಿಯಿದ ಶಾಸಕ ಬಿ.ಹರ್ಷವರ್ಧನ್ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ, ಈ ಬಾರಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಕುತೂಹಲ ಕಾಡುತ್ತಿದೆ. ‘ಕೈ’ ಪಕ್ಷದಿಂದ ಘಟಾನುಘಟಿ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮುಖ್ಯವಾಗಿ, ಕ್ಷೇತ್ರದ ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಾಜಿ ಸಚಿವರೂ ಆದ ಸಿದ್ದರಾಮಯ್ಯ ಅವರ ಆಪ್ತ ಡಾ.ಎಚ್.ಸಿ.ಮಹದೇವಪ್ಪ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರಲ್ಲಿ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಕ್ಷೇತ್ರದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಎಲ್ಲರೂ ಈಗಾಗಲೇ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಜತೆ ಓಡಾಟ ಶುರು ಮಾಡಿದ್ದು, ಸಭೆಗಳನ್ನು ನಡೆಸುತ್ತಿದ್ದಾರೆ. ತಮಗೆ ಟಿಕೆಟ್ ನೀಡಬೇಕು ಎಂದು ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.


ಇನ್ನು ಬಿಎಸ್‌ಪಿಯಿಂದ ಸ್ಥಳೀಯ ಮುಖಂಡ ಶ್ರೀಕಂಠ ಆಕಾಂಕ್ಷಿಯಾಗಿದ್ದಾರೆ. ಇವರು ಈಗಾಗಲೇ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದಲೇ ಸ್ಪರ್ಧೆ ಮಾಡಿದ್ದಾರೆ.
ಒಂದು ಕಾಲದಲ್ಲಿ ಪ್ರಬಲವಾಗಿದ್ದ ಜೆಡಿಎಸ್ ಈಗ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿದೆ. ಹಾಗಾಗಿ, ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ದಳಪತಿಗಳು ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ. ಒಂದು ವೇಳೆ ಸಮರ್ಥ ಸ್ಥಳೀಯ ಅಭ್ಯರ್ಥಿ ಸಿಗದಿದ್ದರೆ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಲು ಮುಂದಾಗಿದ್ದಾರೆ. ಈ ಸಂಬಂಧ ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ ಬಳಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಎಸ್.ಮಹದೇವಯ್ಯ ಕೂಡ ಆಕಾಂಕ್ಷಿ!
ಬಿಜೆಪಿಯಿಂದ ಶಾಸಕ ಬಿ.ಹರ್ಷವರ್ಧನ ಅವರಿಗೆ ಟಿಕೆಟ್ ಫೈನಲ್ ಎನ್ನಲಾಗುತ್ತಿದ್ದರೂ ಮುಖಂಡ ಎಸ್.ಮಹದೇವಯ್ಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಎಸ್.ಮಹದೇವಯ್ಯ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಮಹದೇವಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಕೇವಲ 708 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಆಗ 2ನೇ ಸ್ಥಾನ ಪಡೆದಿದ್ದ ಅವರು, ಒಟ್ಟು 42,159 ಮತ ಗಳಿಸಿದ್ದರು. ಬಳಿಕ ರಾಜಕೀಯ ಸ್ಥಿತ್ಯಂತರದ ಕಾರಣಕ್ಕೆ 2013ರ ಚುನಾವಣೆಯಲ್ಲಿ ಬಿಎಸ್‌ವೈ ಹಿಂಬಾಲಿಸುವ ಮೂಲಕ ಕೆಜೆಪಿಗೆ ಸೇರಿಕೊಂಡರು. ಆ ಚುನಾವಣೆಯಲ್ಲಿ 28,312 ಮತ ಗಳಿಸಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆಗ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕಳಲೆ ಎನ್.ಕೇಶವಮೂರ್ತಿ ವಿರುದ್ಧ ಶ್ರೀನಿವಾಸ ಪ್ರಸಾದ್ ಗೆಲುವು ಸಾಧಿಸಿ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಸಚಿವ ಸ್ಥಾನದಿಂದ ತೆಗೆದಿದ್ದಕ್ಕಾಗಿ ಮುನಿಸಿಕೊಂಡ ಪ್ರಸಾದ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 2017ರಲ್ಲಿ ಉಪಚುನಾವಣೆಗೂ ಕಾರಣರಾದರು. ಆಗ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಜಿಗಿದ ಪ್ರಸಾದ್‌ರಿಗಾಗಿ ಎಸ್.ಮಹದೇವಯ್ಯ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಬಳಿಕ 2018ರಲ್ಲೂ ಪ್ರಸಾದ್ ಅಳಿಯ ಹರ್ಷವರ್ಧನ್‌ಗೆ ಕ್ಷೇತ್ರ ಬಿಟ್ಟುಕೊಟ್ಟರು. ಹಾಗಾಗಿ, ಈ ಬಾರಿ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದರೆ ತಿ.ನರಸೀಪುರ ಕ್ಷೇತ್ರದಿಂದಲಾದರೂ ಟಿಕೆಟ್ ನೀಡುವಂತೆ ನಾಯಕರನ್ನು ಒತ್ತಾಯ ಮಾಡುತ್ತಿದ್ದಾರೆ.


2023ರ ಚುನಾವಣೆಗೆ ಬಿಜೆಪಿಯಿಂದ ಶಾಸಕ ಹರ್ಷವರ್ಧನ್‌ಗೆ ಟಿಕೆಟ್ ಖಚಿತವಾಗಿರುವುದರಿಂದ ಕ್ಷೇತ್ರದಲ್ಲಿ ಶಾಸಕರ ತಿರುಗಾಟ ಜೋರಾಗಿದ್ದು, ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದರಲ್ಲೂ ಒಂದು ವರ್ಷದಿಂದ ಕ್ಷೇತ್ರದಲ್ಲಿ ಬಿರುಸಿನ ಓಡಾಟ, ಕಾರ್ಯಕರ್ತರ ಸಭೆ ನಡೆಸುತ್ತಾ, ಸಂಘಟನೆಯಲ್ಲಿ ನಿರತರಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಕೆಲಸ ಮಾಡುತ್ತಿದ್ದಾರೆ. ಚುನಾವಣೆಗೆ ಸಕಲ ರೀತಿಯಲ್ಲೂ ತಯಾರಾಗುತ್ತಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಆರ್.ಧ್ರುವನಾರಾಯಣ!:
ಲೋಕಸಭಾ ಚುನಾವಣೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಸೋಲು ಕಂಡ ಬಳಿಕ ಮಾಜಿ ಸಂಸದ ಆರ್.ಧ್ರುವನಾರಾಯಣ ರಾಜ್ಯ ರಾಜಕಾರಣದ ಕಡೆ ಮುಖ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಕೊಳ್ಳೇಗಾಲ ಅಥವಾ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಕೊಳ್ಳೇಗಾಲದಿಂದ ಜಯಣ್ಣ, ಎ.ಆರ್.ಕೃಷ್ಣಮೂರ್ತಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹಾಗಾಗಿ, ಎರಡು ವರ್ಷಗಳಿಂದ ನಂಜನಗೂಡು ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ.


ಈ ಮಧ್ಯೆ ಡಾ.ಎಚ್.ಸಿ.ಮಹದೇವಪ್ಪ ತಿ.ನರಸೀಪುರ ಕ್ಷೇತ್ರವನ್ನು ತಮ್ಮ ಮಗ ಸುನೀಲ್ ಬೋಸ್‌ಗೆ ಬಿಟ್ಟುಕೊಟ್ಟು ನಂಜನಗೂಡು ಕ್ಷೇತ್ರದ ಕಡೆ ಪ್ರಯಾಣಿಸಲು ಮತ್ತೆ ಪ್ರಯತ್ನಿಸುತ್ತಿರುವುದು ಧ್ರುವನಾರಾಯಣ ಅವರಿಗೆ ಬೇಸರ ತರಿಸಿದೆ. ಹಾಗಾಗಿ, ಅವರು ನಂಜನಗೂಡಿನ ಜತೆಗೆ ತಿ.ನರಸೀಪುರದಲ್ಲೂ ಓಡಾಟ ಮಾಡುತ್ತಿದ್ದಾರೆ. ಡಾ.ಎಚ್.ಸಿ.ಮಹದೇವಪ್ಪ ನಂಜನಗೂಡು ಕಡೆ ಬರಬಾರದು ಎಂಬ ಉದ್ದೇಶದಿಂದ ಅವರಿಗೆ ಟಾಂಗ್ ನೀಡಲು ತಿ.ನರಸೀಪುರದಲ್ಲೂ ಓಡಾಟ ಮಾಡುತ್ತಿದ್ದಾರೆ. ಆದರೆ, ನಂಜನಗೂಡು ಕ್ಷೇತ್ರದ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ.
ಇನ್ನು ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಕೂಡ ನಂಜನಗೂಡು ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಆರ್. ಧ್ರುವನಾರಾಯಣ ಬರುವುದಾದರೆ ಕ್ಷೇತ್ರ ತ್ಯಾಗಕ್ಕೆ ಸಿದ್ಧರಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಆದರೂ, ಕೇಶವಮೂರ್ತಿ ಅವರು ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿದ್ದಾರೆ. ಕ್ಷೇತ್ರದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಎಚ್‌ಸಿಎಂಗೆ ನಂಜನಗೂಡು ಮೇಲೆ ಕಣ್ಣು!
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಬಾರಿಯೂ ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಅವರು ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. 2017ರಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರ ರಾಜೀನಾಮೆಯಿಂದ ತೆರವಾಗಿದ್ದ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸಲು ಮಹದೇವಪ್ಪ ಬಯಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಆರ್.ಧ್ರುವನಾರಾಯಣ ಮಧ್ಯಪ್ರವೇಶ ಮಾಡಿ ಜೆಡಿಎಸ್‌ನಲ್ಲಿದ್ದ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ 2018ರಲ್ಲೂ ತಿ.ನರಸೀಪುರ ಕ್ಷೇತ್ರವನ್ನು ಸುನೀಲ್‌ಬೋಸ್‌ಗೆ ಬಿಟ್ಟು ಕೊಟ್ಟು ನಂಜನಗೂಡು ಕ್ಷೇತ್ರದ ಕಡೆ ಪ್ರಯಾಣಿಸಲು ಮುಂದಾಗಿದ್ದರು. ಆದರೆ, ಅಂದಿನ ಕೆಲ ರಾಜಕೀಯ ಬದಲಾವಣೆಗಳಿಂದ ಅದು ಸಾಧ್ಯವಾಗಲಿಲ್ಲ. ಕಡೆಗೆ ತಾವೇ ತಿ.ನರಸೀಪುರದಿಂದ ಸ್ಪರ್ಧಿಸಿದ್ದರು. ಈಗ ಮತ್ತೆ 2023ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ತಾವು ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಒಳಗೊಳಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ. ನಂಜನಗೂಡು ಕ್ಷೇತ್ರ ವ್ಯಾಪ್ತಿಯ ಬೆಂಬಲಿಗರನ್ನು ಕರೆದು ಈಗಾಗಲೇ ಅನೇಕ ಸಭೆಗಳನ್ನು ನಡೆಸಿದ್ದಾರೆ. ಕ್ಷೇತ್ರದ ತಮ್ಮ ಬೆಂಬಲಿಗರ ಸಾವು-ನೋವುಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿಯಾದರೂ ಅವರಿಗೆ ಟಿಕೆಟ್ ಸಿಗಲಿದೆಯೇ ಎಂಬ ಕುತೂಹಲ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net