

ನೆಲ್ಯಾಡಿ: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಬಂಟ್ವಾಳದ ನಂದಿ ರಥಯಾತ್ರೆ ಮಂಗಳವಾರ ಬೆಳಗ್ಗೆ ಸೂರ್ಯನಗರ ಶ್ರೀರಾಮ ವಿದ್ಯಾಲಯಕ್ಕೆ ಆಗಮಿಸಿತು.
ಶಾಲಾ ಘೋಷ್ ತಂಡ, ಮಾತೃ ಮಂಡಳಿ ಹಾಗೂ ವರಮಹಾಲಕ್ಷ್ಮೀ ಸಮಿತಿಯ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಪೂರ್ಣ ಕುಂಭ ಹಾಗೂ ಕುಣಿತ ಭಜನೆಯ ಮೂಲಕ ನಂದಿ ರಥಯಾತ್ರೆಯನ್ನು ಸ್ವಾಗತಿಸಿದರು.
ನಂದಿ ರಥಯಾತ್ರೆಯ ಉದ್ದೇಶ ಹಾಗೂ ಗೋ ಸಂರಕ್ಷಣೆಯ ಜತೆಗೆ ನಂದಿ ಸಂರಕ್ಷಣೆ, ಸಹಜ ಕೃಷಿ ವಿಸ್ತರಣೆ, ಮಣ್ಣು ಉಳಿಸುವ ಕೃಷಿಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹರಿರಾಮಚಂದ್ರ ಉಪ್ಪಿನಂಗಡಿ ಮಾಹಿತಿ ನೀಡಿದರು.
ನಂದಿಗೆ ಮಾಲಾರ್ಪಣೆ, ಗೋಗ್ರಾಸ, ಪೂಜೆ ನಡೆಸಲಾಯಿತು. ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಮತ್ತು ಶಿಕ್ಷಕ ವರ್ಗ ಹಾಗೂ ಆಡಳಿತ ಮಂಡಳಿಯವರಿಂದ ನಂದಿಗೆ ಪುಷ್ಪಾರ್ಚನೆ ನಡೆಯಿತು. ನೆಲ್ಯಾಡಿ ಸಿಎ ಬ್ಯಾಂಕಿನ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಉಪ್ಪಿನಂಗಡಿ ಸಿಎ ಬ್ಯಾಂಕಿನ ಅಧ್ಯಕ್ಷ ಸುನೀಲ್ ಕುಮಾರ್, ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಸದಸ್ಯರಾದ ಸುಬ್ರಾಯ ಪುಣಚ, ಜಿನ್ನಪ್ಪ ಪೂವಾಜೆ, ಸುಂದರ ಗೌಡ ಅತ್ರಿಜಾಲು, ಹಾರ್ಪಾಳ ಶಾಸ್ತಾರ ದೇವಸ್ಥಾನದ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ವಿಕಾಸ ಸಭೆಯ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕಿ ಶುಭಾರಾಣಿ ಕಾರ್ಯಕ್ರಮ ನಿರೂಪಿಸಿದರು.