

ಶ್ರೀನಿವಾಸಪುರ: ನಂದಿನಿ ಹಾಲಿನಿಂದ ತಯಾರಿಸುವ ಉತ್ಪನ್ನಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ನಂದಿನಿ ಪಾರ್ಲರ್ಗಳನ್ನು ಗ್ರಾಮೀಣ ಪ್ರದೇಸಕ್ಕೂ ವಿಸ್ತರಿಸಲಾಗುತ್ತಿದೆ. ನಂದಿನಿ ಹಾಲಿನಿಂದ ತಯಾರಾಗುವ ಉತ್ಪನ್ನಗಳು ಗುಣಮಟ್ಟದಿಂದ ಕೂಡಿದೆ ಎಂದು ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್ರೆಡ್ಡಿ ತಿಳಿಸಿದರು.
ಪಟ್ಟಣದ ಮಾರುತಿನಗರ ಬಡಾವಣೆಯ ಮುಖ್ಯರಸ್ತೆಯಲ್ಲಿ ಶುಕ್ರವಾರ ನೂತನ ನಂದಿನಿ ಪಾರ್ಲರ್ ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದಕರು ಹಾಲು ನೀಡುತ್ತಾರೆ, ಆದರೆ ಅದರ ಉತ್ಪನ್ನಗಳನ್ನು ಸವಿಯಲು ಸಾಧ್ಯವಿರಲಿಲ್ಲ. ಅದಕ್ಕಾಗಿ ನಂದಿನಿ ಪಾರ್ಲರ್ಗಳನ್ನು ಹೆಚ್ಚಾಗಿ ಪ್ರಾರಂಭಿಸಲಾಗುತ್ತಿದೆ. ಮಳಿಗೆ ಪ್ರಾರಂಭಿಸಲು ಮುಂದೆ ಬಂದವರಿಗೆ ಬಡಾವಣೆಗೆ ಒಂದರಂತೆ ಪಾರ್ಲರ್ ನೀಡುತ್ತೇವೆ. ನಂದಿನಿ ಹಾಲು ಮತ್ತು ಉತ್ಪನ್ನಗಳು ಸಾರ್ವಜನಿಕರಿಗೆ ಸಿಗುವಂತೆ ಮಾಡುವ ಉದ್ದೇಶ ಒಕ್ಕೂಟದ್ದಾಗಿದೆ ಎಂದರು.
ಇತ್ತೀಚೆಗೆ ಒಕ್ಕೂಟಕ್ಕೆ ಹಾಲಿನ ಶೇಖರಣೆ ಹೆಚ್ಚಾಗುತ್ತಿದೆ. ಅದರಂತೆ ಅದರ ಉತ್ಪನ್ನಗಳ ಮಾರುಟ್ಟೆ ವಿಸ್ತರಣೆ ಮಾಡುತ್ತಿದ್ದೇವೆ. ಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ನಂದಿನಿ ಉತ್ಪನ್ನ ಮತ್ತು ಹಾಲು ಸರಬರಾಜು ಮಾಡುತ್ತಿದ್ದೇವೆ ಎಂದರು.
ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ಕೋಮುಲ್ನಿಂದ ತಯಾರಾಗುವ ಎಲ್ಲ ಉತ್ಪನ್ನಗಳು ಗುಣಮಟ್ಟದಿಂದ ಕೂಡಿವೆ. ಸಾರ್ವಜನಿಕರಿಗೆ ನಿಖರ ಬೆಲೆಯಲ್ಲಿ ಕೈಗೆ ಎಟಕುವಂತಹ ದರದಲ್ಲಿ ನೀಡುತ್ತಿದ್ದೇವೆ. ಬೆಳಗಿನ ಜಾವ ಹಾಲಿಗಾಗಿ ದೂರ ಹೋಗಬೇಕಿಲ್ಲ. ಪ್ರತಿ ಬಡಾವಣೆಯ ಮತ್ತು ವೃತ್ತದಲ್ಲಿ ನಂದಿನಿ ಪಾರ್ಲರ್ ಪ್ರಾರಂಭಿಸುತ್ತಿದ್ದೇವೆ ಎಂದರು.
ಇತ್ತೀಚೆಗೆ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿದ್ದಾರೆ. ಆದ ಕಾರಣ ಗುಣಮಟ್ಟದ ಉತ್ಪನ್ನ ತಯಾರು ಮಾಡಲು ಸಾಧ್ಯವಾಗಿದೆ. ಈಗಾಗಲೇ ಪ್ರತಿ ಗ್ರಾಮದಲ್ಲಿಯೂ ಹಾಲಿನ ಡೇರಿ ಪ್ರಾರಂಭಿಸುತ್ತಿದ್ದೇವೆ. ಅದೇ ರೀತಿ ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ನಂದಿನಿ ಉತ್ಪನ್ನ ಸಿಗುವ ಹಾಗೆ ಮಾಡಲಾಗುವುದು ಎಂದರು.