ನಂದಿನಿ ಹಾಲಿನ ದರದಲ್ಲಿ ಏರಿಕೆ

17GKK3
ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಎಲ್ಲ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯನ್ನು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ. ಬಸವರಾಜ ಪರವಣ್ಣವರ ಇತರರಿದ್ದರು.
Published on

ಗೋಕಾಕ: ರೈತರ ಹಿತದೃಷ್ಟಿ ಮತ್ತು ಜಿಲ್ಲಾ ಹಾಲು ಒಕ್ಕೂಟದ ಬೇಡಿಕೆಯಂತೆ ನಂದಿನಿ ಹಾಲಿನ ದರದಲ್ಲಿ ಬದಲಾವಣೆಯಾಗಿದ್ದು, ಎಮ್ಮೆ ಹಾಲಿಗೆ 3.40 ರೂ. ಮತ್ತು ಆಕಳು ಹಾಲಿಗೆ ಪ್ರತಿ ಲೀಟರ್‌ಗೆ 1 ರೂ. ಹೆಚ್ಚಳ ಮಾಡಲಾಗುತ್ತಿದೆ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದರು.

ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಎಲ್ಲ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದರು. ಫೆಬ್ರವರಿ 21ರಿಂದ ಹೊಸ ದರಗಳು ಅನ್ವಯವಾಗಲಿವೆ ಎಂದರು.

ಪ್ರತಿ ಲೀಟರ್ ಎಮ್ಮೆ ಹಾಲಿಗೆ 41.60 ರೂ. ಇದ್ದು, 3.40 ರೂ. ಹೆಚ್ಚಳದಿಂದ 45 ರೂ.ಗೆ ಹೆಚ್ಚಳವಾಗಲಿದೆ. ಜತೆಗೆ ಸರ್ಕಾರದ 5 ರೂ. ಪ್ರೋತ್ಸಾಹಧನ ಸೇರಿ ಪ್ರತಿ ಲೀಟರ್‌ಗೆ ಒಟ್ಟು 50 ರೂ. ರೈತರಿಗೆ ಸಿಗಲಿದೆ. ಅದರಂತೆ ಆಕಳು ಹಾಲು ಈಗ 29.10 ರೂ. ಇದ್ದು, 1 ರೂ.ಗೆ ಹೆಚ್ಚಿಸಲಾಗಿದೆ. ಸರ್ಕಾರದ ಪ್ರೋತ್ಸಾಹಧನ ಸೇರಿ 35.10 ರೂ. ಸಿಗಲಿದೆ. ಹೆಚ್ಚಳವಾದ ಹಣವು ರೈತರ ಖಾತೆಗಳಿಗೆ ನೇರವಾಗಿಯೇ ಜಮೆ ಆಗಲಿದೆ ಎಂದು ತಿಳಿಸಿದರು.

ಮುಂಬರುವ ಜೂನ್ ತಿಂಗಳ ನಂತರ ಸಿಬ್ಬಂದಿ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಯದರ್ಶಿಗಳಿಗೆ

ಒಕ್ಕೂಟದಿಂದ ಜೀವವಿಮೆ ಮಾಡಿಸುವ ಉದ್ದೇಶ ಸಹ ಇಟ್ಟುಕೊಂಡಿದ್ದೇವೆ ಎಂದರು.

ಬೆಮುಲ್ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ. ಬಸವರಾಜ ಪರವಣ್ಣವರ, ಬಾಬುರಾವ ವಾಗ್ಮೋಡೆ, ವಿರೂಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ನಾಮನಿರ್ದೇಶಿತ ನಿರ್ದೇಶಕರಾದ ಸದಾಶಿವ ದೇಶಿಂಗೆ, ರವೀಂದ್ರ ಪಾಟೀಲ, ಡಾ. ರಾಜೀವ ಕುಲೇರ, ಜಯಕುಮಾರ, ಡಾ. ಕಷ್ಣ ಕ್ಯೂರ್, ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎನ್. ಶ್ರೀಕಾಂತ ಇತರರಿದ್ದರು.

ಮೆಗಾ ಡೇರಿ ಸ್ಥಾಪಿಸುವ ಉದ್ದೇಶ

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ಮಾದರಿಯಾಗಿ ರೂಪಿಸುವ ಗುರಿ ಇದೆ. ಇದಕ್ಕಾಗಿ ಮೆಗಾ ಡೇರಿ ಸ್ಥಾಪಿಸುವ ಮಹತ್ವಾಕಾಂಕ್ಷಿ ನನ್ನದು. ಇದಕ್ಕಾಗಿ ಪ್ರತಿನಿತ್ಯ 4 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕು. ಮುಂದಿನ ದಿನಗಳಲ್ಲಿ ಈ ಗುರಿ ತಲುಪಬೇಕಾಗಿದೆ. ರೈತರು ಗುಣಮಟ್ಟದ ಹಾಲು ಪೂರೈಸಬೇಕು. ರೈತರಿಗೆ ಕೇವಲ ಹತ್ತು ದಿನಗಳೊಳಗೆ ಬಿಲ್ ಸಂದಾಯ ಮಾಡಲು ಕ್ರಮ ಕೆಗೊಳ್ಳಲಾಗಿದೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಸುಮಾರು 400 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ ಎಂದು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net