

ಮೈಸೂರು: ಎದುರಾಳಿಯ ಪಟ್ಟಿಗೆ ಪ್ರತಿಪಟ್ಟು ಹಾಕುವಲ್ಲಿ ಯಶಸ್ವಿಯಾದ ಬನ್ನೂರಿನ ಕುಶಾಲಯ್ಯ ಗರಡಿಯ ಪೈಲ್ವಾನ್ ನಂದಿನಿ ಭಾನುವಾರ ಸಾಹುಕಾರ್ ಎಸ್.ಚನ್ನಯ್ಯ ಕ್ರೀಡಾಂಗಣದ ಮಹಾರಾಜ ಶ್ರೀ ಜಯ ಚಾಮರಾಜ ಒಡೆಯರ ಕುಸ್ತಿ ಅಖಾಡದಲ್ಲಿ ಆಯೋಜಿಸಿದ್ದ ಮಟ್ಟಿಕುಸ್ತಿಯಲ್ಲಿ ಜಯ ಸಾಧಿಸಿದರು.
ನಂದಿನಿ ತನ್ನ ಎದುರಾಳಿ ಮಂಡ್ಯ ಜಿಲ್ಲಾ ಕುಸ್ತಿ ಸಂಘದ ಪೈ.ವರಲಕ್ಷ್ಮೀ ಅವರನ್ನು ಕ್ಷಣಾರ್ಧದಲ್ಲೇ ಚಿತ್ ಮಾಡಿದರು. ನವೀಕೃತಗೊಂಡಿರುವ ಕುಸ್ತಿ ಅಖಾಡದಲ್ಲಿ ಉದ್ಘಾಟನೆ ಅಂಗವಾಗಿ 40 ಜತೆ ಮಟ್ಟಿ ಕುಸ್ತಿ ನಡೆದವು. ಈ ಪೈಕಿ ಹತ್ತಕ್ಕೂ ಹೆಚ್ಚು ಮಹಿಳಾ ಕುಸ್ತಿಗಳು ನಡೆದಿದ್ದು ವಿಶೇಷ. ಮತ್ತೊಂದು ಮಹಿಳಾ ಕುಸ್ತಿಯಲ್ಲಿ ಮಂಡ್ಯ ಜಿಲ್ಲಾ ಹವ್ಯಾಸಿ ಕುಸ್ತಿ ಸಂಘದ ಪೈ.ದೇವಿಕಾ ವಿರುದ್ಧ ಮೈಸೂರು ಜಯಚಾಮರಾಜ ಗರಡಿ ಸಂಘದ ಪೈ.ಯಶಸ್ವಿನಿ ಜಯ ಸಾಧಿಸಿದರು. ತೀವ್ರ ರೋಚಕತೆಯಿಂದ ಕೂಡಿದ ಪುರುಷರ ವಿಭಾಗದಲ್ಲಿ ನಂಜನಗೂಡಿನ ಪೈ.ರೇಣುದಾಸ್ ಬಿನ್ ಚೆನ್ನಪ್ಪ ವಿರುದ್ಧ ಹೊಸಳ್ಳಿಯ ಪೈ.ಸೂರಜ್ ಬಿನ್ ಚೆಲುವರಾಜು ಜಯ ಪಡೆದರು.
ಇದಕ್ಕೂ ಮುನ್ನ ರಾಜವಂಶಸ್ಥೆ ಡಾ.ಪ್ರಮೋದಾ ದೇವಿ ಒಡೆಯರ್ ನವೀಕೃತ ಕುಸ್ತಿ ಅಖಾಡವನ್ನು ಉದ್ಘಾಟಿಸಿದರು. ಜತೆಗೆ ಕುಸ್ತಿ ಪಂದ್ಯಾವಳಿಗೂ ಚಾಲನೆ ನೀಡಿ, ಕುಸ್ತಿಪಟುಗಳಿಗೆ ಶುಭ ಕೋರಿದರು. ಚಾಮರಾಜ ಒಡೆಯರ್ ಗಡಿ ಸಂಘದ ಪ್ರಧಾನ ಕಾರ್ಯದರ್ಶಿ ಪೈ.ಎಸ್.ಮಹದೇವ್, ಜಂಟಿ ಕಾರ್ಯದರ್ಶಿ ಸಿ.ಬಸವರಾಜ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ ಜಿ.ಎನ್.ಅನಂತವರ್ಧನ ಇತರರಿದ್ದರು.