

ಮೈಸೂರು: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ದಿಂದ ನಂದಿನಿ ಆಯ್ದ ಉತ್ಪನ್ನಗಳ ಮೇಲೆ ಶೇ.15 ರಿಯಾಯಿತಿ ಘೋಷಿಸಿದೆ.
ದಿನಾಚರಣೆ ಅಂಗವಾಗಿ ಇದೇ ಪ್ರಥಮ ಬಾರಿಗೆ ಆನೆಯ ಮೇಲೆ ಮರದ ಅಂಬಾರಿ ಇಟ್ಟು ಅದರಲ್ಲಿ ನಂದಿನಿ ಉತ್ಪನ್ನಗಳನ್ನು ನಗರದಲ್ಲಿ ಮಂಗಳವಾರ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೈಮುಲ್ ಅಧ್ಯಕ್ಷ ಆರ್.ಚೆಲುವರಾಜು ಮಾತನಾಡಿ, ಎಲ್ಲರಿಗೂ ನಂದಿನಿ ಉತ್ಪನ್ನಗಳು ಸುಲಭ ದರದಲ್ಲಿ ಸಿಗಬೇಕು. ಇದಕ್ಕಾಗಿಯೇ ಇಂದಿನಿಂದ ಗ್ರಾಹಕರಿಗಾಗಿ ಮ್ಯಾಂಗೋ ಲಸ್ಸಿ, ರಾಗಿ ಅಂಬಲಿ, ಬಯೋಟಿಕ್ ಮಜ್ಜಿಗೆ, ಪ್ರೊ ಬಯೋಟಿಕ್ ಮೊಸರು, ಬರ್ಫಿ, ಸಮೃದ್ಧಿ ಹಾಲು, ಸಿಹಿ ಲಸ್ಸಿ, ಗೋಧಿ ಲಡ್ಡು ಉತ್ಪನ್ನಗಳ ಮೇಲೆ ಶೇ.15 ರಿಯಾಯಿತಿ ನೀಡುತ್ತಿದ್ದೇವೆ ಎಂದರು.
ಬೇರೆ ಉತ್ಪನ್ನಗಳ ಮೇಲೆ ವ್ಯಾಮೋಹ ಆಗದೆ ನಂದಿನಿ ಉತ್ಪನ್ನಗಳನ್ನೇ ಹೆಚ್ಚೆಚ್ಚು ಬಳಸಿ. ಈಗ ಮಾಡಿರುವ ರಿಯಾಯಿತಿ ಘೋಷಣೆ ಮುಂದಿನ ಆದೇಶದವರೆಗೆ ಜಾರಿಯಲ್ಲಿದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಿ. ಇದರಿಂದ ನಮ್ಮ ರೈತರಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯಿಂದ ವಿಶ್ವ ಮಟ್ಟದಲ್ಲಿ ಹಾಲು ದಿನ ಆಚರಿಸುತ್ತಿದ್ದೇವೆ. ವಿಶ್ವ ಹಾಗೂ ರಾಜ್ಯದ ಮಟ್ಟದಲ್ಲಿ ಹಾಲಿನ ಉತ್ಪನ್ನಗಳು ತನ್ನದೇ ಆದ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿವೆ. ಈ ಅಂಗವಾಗಿ ನಂದಿನಿಯ 68 ಉತ್ಪನ್ನಗಳ ಜತೆಗೆ ಅನೇಕ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ಇಡೀ ದೇಶದಲ್ಲಿ ಇಂದು ನಂದಿನಿ ಉತ್ಪನ್ನಗಳು ಮಾರಾಟ ಮಾಡುತ್ತಿದ್ದೇವೆ. ದೇಶದಲ್ಲಿ ಬೇರೆ ಎಷ್ಟು ಹಾಲಿನ ಉತ್ಪನ್ನಗಳಿವೆಯೋ ಅದೆಲ್ಲದಕ್ಕಿಂತಲೂ ಕಡಿಮೆ ದರದಲ್ಲಿ ನಂದಿನಿ ಹಾಲಿನ ದರವಿದೆ. ಯಾವುದೇ ಅತಿಯಾದ ಲಾಭದ ಆಸೆ ಇಲ್ಲದೆ, ಗ್ರಾಹಕರು ಹಾಗೂ ರೈತರ ಹಿತದೃಷ್ಟಿಯಿಂದ ಕೆಎಂಎಫ್ ನಿಭಾಯಿಸಿಕೊಂಡು ಹೋಗುತ್ತಿದೆ ಎಂದು ವಿವರಿಸಿದರು.
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್‌ನಾಯ್ಕ್ ಪ್ರಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಮೈಮುಲ್ ರೈತ ಹಾಗೂ ಗ್ರಾಹಕ ಸ್ನೇಹಿಯಾಗಿ ಅನೇಕ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಈಗ ನೂತನ ಉತ್ಪನ್ನಗಳನ್ನು ಸಹ ವಿಶ್ವ ಹಾಲು ದಿನದಂದು ಬಿಡುಗಡೆ ಮಾಡಿದ್ದು, ಗ್ರಾಹಕರು ಇದರ ಸದುಪಯೋಗಪಡಿಸಿಕೊಂಡು ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಕೋರಿದರು.
ಕೆ.ಆರ್.ನಗರ ಪಶು ವೈದ್ಯಾಧಿಕಾರಿ ಡಾ.ಮಂಜುನಾಥ್, ಅಪೊಲೋ ಆಸ್ಪತ್ರೆ ಪ್ರಸೂತಿ ತಜ್ಞೆ ಕವಿತಾ, ಕಾವೇರಿ ಮಲ್ಟಿಸೆಷಾಲಿಟಿ ಆಸ್ಪತ್ರೆಯ ಪೌಷ್ಟಿಕ ತಜ್ಞೆ ಶಶಿಕಲಾ ಅವರು ಹಾಲಿನ ಮಹತ್ವ ಕುರಿತು ಮಾತನಾಡಿದರು.
ಮೈಮಲ್ ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಕೆ.ಈರೇಗೌಡ, ದಾಕ್ಷ್ಷಾಯಿಣಿ ಬಸವರಾಜಪ್ಪ, ಬಿ.ಕೆ.ಲೀಲಾ ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಮತ್ತು ಮೈಮುಲ್ ಪದನಿಮಿತ್ತ ನಿರ್ದೇಶಕ ಡಾ.ನಾಗರಾಜು, ಒಕ್ಕೂಟದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.