

ಬಳ್ಳಾರಿ : ಚೀನಾದಲ್ಲಿ ಈಚೆಗೆ ನಡೆದ ಏಷ್ಯನ್‌ಗೇಮ್ಸ್‌ನಲ್ಲಿ ಮಹಿಳೆಯರ ಹೆಪ್ಟಾಥ್ಲಾನ್ 800 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರನ್ನು ಜಿಲ್ಲಾಡಳಿತದಿಂದ ಶನಿವಾರ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.
ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಂದಿನಿ ಅಗಸರ ಅವರನ್ನು ಗೌರವಿಸಲಾಯಿತು.
ಈ ವೇಳೆ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ನಂದಿನಿ ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಜನಿಸಿದವರು. ಅವರು ನಮ್ಮ ಜಿಲ್ಲೆಯ ವಜ್ರ ಇದ್ದಂತೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾ ತರಬೇತಿಗಾಗಿ ಅವರಿಗೆ 3 ಲಕ್ಷ ರೂ. ಗೌರವಧನ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಕ್ರೀಡಾ ಮನೋಭಾವ ಮತ್ತು ಶ್ರೇಷ್ಠತೆಯನ್ನು ರೂಪಿಸಿಕೊಂಡಿರುವ ನಂದಿನಿ ಅವರು, ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ, ಇನ್ನು ಹೆಚ್ಚಿನ ಪದಕಗಳನ್ನು ತಮ್ಮದಾಗಿಸಿಕೊಂಡು, ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತರಬೇಕು. ಮುಂದಿನ ಎಲ್ಲ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದಿನಿ ಅಗಸರ, ಐದು ವರ್ಷಗಳ ಕಾಲ ಹೈದರಾಬಾದ್‌ನಲ್ಲಿ ಸತತ ತರಬೇತಿ ಪಡೆಯುವ ಮೂಲಕ ಈ ಸಾಧನೆಗೆ ಶ್ರಮವಹಿಸಿದ್ದೇನೆ. ನನ್ನ ಹುಟ್ಟೂರು ಬಳ್ಳಾರಿ ಜಿಲ್ಲೆ ಎನ್ನುವುದು ಹೆಮ್ಮೆ ಎನಿಸುತ್ತದೆ. ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸಿದ ನನ್ನ ತಂದೆ-ತಾಯಿಗೆ ಈ ಕೀರ್ತಿ ಸಲ್ಲುತ್ತದೆ. ತರಬೇತಿಯಲ್ಲಿ ಕಾಳಜಿ ಮತ್ತು ಆಸಕ್ತಿ ವಹಿಸಿ ನನಗೆ ಶಕ್ತಿ ತುಂಬಿದ ನನ್ನ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನನ್ನನ್ನು ಗುರುತಿಸಿ ಸನ್ಮಾನಿಸಿದ ಜಿಲ್ಲಾಡಳಿತಕ್ಕೆ ಕೃತಜ್ಞತೆಗಳು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ನಂದಿನಿ ರಾಜ್ಯದ ಯುವ ಜನತೆಯ ಐಕಾನ್. ಅವರನ್ನು ನೋಡಿ ಸಾಕಷ್ಟು ಜನರು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಪಾಲಿಕೆ ಉಪ ಮೇಯರ್ ಬಿ.ಜಾನಕಿ, ಬಳ್ಳಾರಿ ತಹಸೀಲ್ದಾರ್ ಗುರುರಾಜ್, ಸಿರಗುಪ್ಪ ತಹಸೀಲ್ದಾರ್ ವಿಶ್ವನಾಥ್, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ ಹಾಗೂ ನಂದಿನಿ ಅವರ ತಂದೆ ಯಲ್ಲಪ್ಪ, ಇತರರಿದ್ದರು.