

ಚಿಕ್ಕಬಳ್ಳಾಪುರ: ನಂದಿ ಶ್ರೀ ಭೋಗನಂದೀಶ್ವರ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಗಮನ ಸೆಳೆಯಲು ಈಶ ಸದ್ಗುರುವಿನೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಚರ್ಚಿಸಿದ್ದಾರೆ.
ಈಶ ಫೌಂಡೇಷನ್ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸದ್ಗುರುಗಳನ್ನು ಭೇಟಿ ಮಾಡಿದ ಶಾಸಕರು, ನಂದಿ ದೇಗುಲದ ಇತಿಹಾಸ, ವಾಸ್ತುಶಿಲ್ಪ, ಕಲೆ, ಪರಂಪರೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ಇಲ್ಲಿನ ದೇಗುಲಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಸಿಕ್ಕಿದೆ. ಹಾಗೆಯೇ ಜಾಗತಿಕವಾಗಿಯೂ ಇಲ್ಲಿನ ವಿಶೇಷತೆಯನ್ನು ಗುರುತಿಸುವ ನಿಟ್ಟಿನಲ್ಲಿ ಯುನೆಸ್ಕೋ ಸಂಸ್ಥೆಯ ಗಮನ ಸೆಳೆಯಬೇಕಾಗಿದೆ ಎಂದು ಮನವಿ ಮಾಡಿದರು. ಇದಕ್ಕೆ ಸದ್ಗುರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಿಂದ 7 ಕಿ.ಮೀ ದೂರದಲ್ಲಿರುವ ನಂದಿ ಗ್ರಾಮದಲ್ಲಿ ರಾಜಮಹಾರಾಜರ ಕಾಲದಲ್ಲಿ ನಿರ್ಮಿತ ಶ್ರೀ ಭೋಗನಂದೀಶ್ವರ ಸ್ವಾಮಿ ದೇಗುಲವಿದೆ. ವಿಶಾಲವಾದ ಜಾಗದಲ್ಲಿ ಕಲಾತ್ಮಕ ಗೋಪುರ, ಕಲ್ಯಾಣಿ, ಕಲ್ಲಿನ ಮಂಟಪ, ಕಲ್ಲಿನ ಚಿತ್ತಾರ ಕಂಬಗಳು, ದೇವರ ಮಂದಿರಗಳು ಆಕರ್ಷಕವಾಗಿದ್ದು ಕಲೆಯು ಕಲ್ಲರಳಿ ಹೂವಾಗಿದೆ ಎಂಬಂತೆ ಭಾಸವಾಗುತ್ತದೆ. ಮಹಾಶಿವರಾತ್ರಿ, ಕಾರ್ತಿಕ ಮಾಸ ಸೇರಿದಂತೆ ವಿಶೇಷ ದಿನಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಲಕ್ಷಾಂತರ ಭಕ್ತ ಸಮೂಹ ನಡೆಯುತ್ತದೆ.
ನಂದಿ ಬೆಟ್ಟದ ತಪ್ಪಲಿನಲ್ಲಿರುವ ದೇಗುಲವು ಕೇಂದ್ರ ಪುರಾತತ್ವ ಇಲಾಖೆ, ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಕಳೆದ ರಾಜ್ಯ ಬಜೆಟ್ ನಲ್ಲೂ ದೇಗುಲಕ್ಕೆ ವಿಶೇಷ ಲೇಸರ್ ಲೈಟಿಂಗ್, ಆಕರ್ಷಕ ಬೆಳಕಿನ ವ್ಯವಸ್ಥೆ ಸೇರಿದಂತೆ ಹಲವು ಆಕರ್ಷಣೀಯ ಕೆಲಸಗಳ ಮೂಲಕ ಮೆರಗು ನೀಡುವುದರ ಬಗ್ಗೆ ಪ್ರಸ್ತಾಪವಾಗಿದ್ದವು.