ದೇವರ ನಾಮಸ್ಮರಣೆಯಲ್ಲಿ ನಂದಿ ಬೆಟ್ಟ ಪ್ರದಕ್ಷಿಣೆ ಹಾಕಿದ ಭಕ್ತರು

112
Published on

ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಆಷಾಡ ಮಾಸದ ತಂಪಾದ ಗಾಳಿ ಮತ್ತು ಆಹ್ಲಾದಕರ ವಾತಾವರಣದ ನಡುವೆ ನೂರಾರು ಭಕ್ತರು ದೇವರ ನಾಮಸ್ಮರಣೆಯಲ್ಲಿ ಪ್ರಾಕೃತಿಕ ರಮ್ಯತಾಣ ನಂದಿ ಗಿರಿಧಾಮದ ಪ್ರದಕ್ಷಿಣೆ ಹಾಕಿದರು.

ಶ್ರೀ ನಂದಿ ಗಿರಿಪ್ರದಕ್ಷಿಣಾ ಸೇವಾ ಟ್ರಸ್ಟ್ ವತಿಯಿಂದ ಆಷಾಡ ಮಾಸದ ಕಡೇ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಬೆಂಗಳೂರು, ಮಾಗಡಿ, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಆಲಯಕ್ಕೆ ಆಗಮಿಸಿದ್ದರು. ಬೆಳಗ್ಗೆ 6 ಗಂಟೆಗೆ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬೆಟ್ಟಗಳ ನಡುವೆ ಕಾಲ್ನಡಿಗೆಯಲ್ಲಿ ಸಾಗುವುದಕ್ಕೆ ಚಾಲನೆ ನೀಡಲಾಯಿತು.

ಎಂದಿನಂತೆ ಚುಮುಚುಮು ಚಳಿ, ತುಂತುರು ಹನಿಯ ನಡುವೆ ವೃದ್ಧರು, ನವ ವಿವಾಹಿತರು, ಪುಟ್ಟ ಮಕ್ಕಳೊಂದಿಗೆ ಮಹಿಳೆಯರು, ಯುವಕ ಯುವತಿಯರು ಸೇರಿದಂತೆ ಹಲವರು ಭಾಗವಹಿಸಿದ್ದು ದೇವರ ನಾಮಸ್ಮರಣೆಯೊಂದಿಗೆ ಹೆಜ್ಜೆ ಹಾಕಿದರು. ಭಜನಾ ಮಂಡಳಿಗಳು ದೇವರ ಹಾಡುಗಳನ್ನು ಹಾಡುತ್ತ ಸಾಗುತ್ತಿರುವುದಕ್ಕೆ ಭಕ್ತಾದಿಗಳು ಧ್ವನಿಗೂಡಿಸಿದರು.

ನಂದಿ ದೇವಾಲಯದಿಂದ ಅಂಗಟ್ಟ, ಈರೇನಹಳ್ಳಿ, ಕುಡವತಿ, ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಗಾಂದಿಪುರ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ಸುಮಾರು 14 ಕಿ.ಮೀ.ಕಾಲ್ನಡಿಗೆಯಲ್ಲಿ ಪುನಃ ಆಲಯಕ್ಕೆ ಬಂದು ದೇವರಿಗೆ ನಮಿಸುವ ಮೂಲಕ ಪ್ರದಕ್ಷಿಣೆಯನ್ನು ಅಂತ್ಯಗೊಳಿಸಲಾಯಿತು.

* ಸದ್ಬಕ್ತಿಯಲ್ಲಿ ಪ್ರದಕ್ಷಿಣೆ ಶ್ರೀ ಭೋಗನಂದೀಶ್ವರಸ್ವಾಮಿ ಮತ್ತು ಶ್ರೀ ಯೋಗನಂದೀಶ್ವರ ಸ್ವಾಮಿ ದೇವಾಲಯವನ್ನು ಹೊಂದಿರುವ ನಂದಿ ಗಿರಿಯನ್ನು ಆಷಾಡ ಮಾಸದ ಸೋಮವಾರ ಸುತ್ತು ಹಾಕಿದರೆ ಕಾಶಿಗೆ ಹೋಗಿ ಬಂದಷ್ಟು ಒಳ್ಳೆಯದೆಂಬ ಭಾವನೆ ಹಲವರದ್ದು. ಈ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಭಕ್ತಾದಿಗಳು ಪ್ರತಿ ವರ್ಷ ಭಕ್ತಿಭಾವದಲ್ಲಿ ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸುತ್ತಾರೆ. ಭಕ್ತರಿಗೆ ಕಾರಹಳ್ಳಿ, ಕಣಿವೆಪುರ ಕ್ರಾಸ್ ಸಮೀಪ ನೀರು, ಗ್ಲುಕೋಸ್, ಕಲ್ಲು ಸಕ್ಕರೆ, ಬಿಸ್ಕೆಟ್ ಮತ್ತು ನಿಂಬೆಹುಳಿ ಪಪ್ಪರಮೆಂಟ್ ಗಳನ್ನು ವಿತರಿಸಲಾಯಿತು. ಆಲಯದಲ್ಲಿ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯ ದಾಸೋಹ ಸಮಿತಿ ಮತ್ತು ಗಿರಿಪ್ರದಕ್ಷಣಿ ಸೇವಾ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಉಪಾಹಾರ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.

  • ಪ್ರತಿ ವರ್ಷ ಗಿರಿ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗವಹಿಸುವಿಕೆಯು ವಾಡಿಕೆಯಾಗಿದೆ. ಈ ಬಾರಿ ಮಳೆ ಅಡ್ಡಿಯ ಆತಂಕ ಇತ್ತು. ನಂದಿ ಬೆಟ್ಟದ ತಪ್ಪಲಿನ ಚಳಿ ವಾತಾವರಣದಲ್ಲಿ ಕಾಲ್ನಡಿಗೆಯಲ್ಲಿ ಸಾಗುವುದಕ್ಕೆ ಖುಷಿಯಾಗುತ್ತದೆ.

ನಾರಾಯಣಸ್ವಾಮಿ, ಶಿಕ್ಷಕ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net