

ಸಿದ್ದಾಪುರ : ವಿರಾಜಪೇಟೆ ಅರಣ್ಯ ವಲಯದ ವಿರಾಜಪೇಟೆ ಶಾಖೆಯ ವ್ಯಾಪ್ತಿಯ ಅಂಬಟ್ಟೆ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಂದಿ ಮತ್ತು ಹಲಸಿನ ಮರದ 15 ನಾಟಾಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ ಮತ್ತು ವಿರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ.ಗೋಪಾಲ ಇವರ ಮಾರ್ಗದರ್ಶನದಲ್ಲಿ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಸ್ವರಾಜ್ ಮಜ್ದಾ ವಾಹನದಲ್ಲಿ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದದ್ದು ಕಂಡುಬಂದಿದೆ. ಅಷ್ಟರಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದು, ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಅಂದಾಜು 2 ಲಕ್ಷ ರೂ. ಮೌಲ್ಯದ ಮರ ಹಾಗೂ ವಾಹನ ಸೇರಿ ಅಂದಾಜು 8 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವಿರಾಜಪೇಟೆ ವಲಯದ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎಂ.ದೇವಯ್ಯ ಸಿಬ್ಬಂದಿ ಕೆ.ಆರ್. ಆನಂದ, ಪಿ.ಡಿ.ಜನಾರ್ಧನ್, ಸಿ.ವಿ.ಜಿಡ್ಡಿಮನಿ, ಸಚಿನ ನಿಂಬಾಳ್ಯರ್, ಎಂ.ಎಸ್.ಮೋನಿಷಾ, ಸಿ.ಟಿ.ಅನಿಲ್ ಹಾಗೂ ವಿರಾಜಪೇಟೆ ವಲಯದ ಗಸ್ತು ಅರಣ್ಯ ಪಾಲಕರು ಮತ್ತು ಆರ್‌ಆರ್‌ಟಿ ತಂಡದ ಸಿಬ್ಬಂದಿ, ವಾಹನ ಚಾಲಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.