

ಚಿಕ್ಕಬಳ್ಳಾಪುರ : ಕರ್ನಾಟಕದ ಊಟಿ ಎಂದೇ ಹೆಸರಾಗಿರುವ ನಂದಿ ಗಿರಿಧಾಮದ ದುನಿಯಾ ನಿಧಾನವಾಗಿ ದುಬಾರಿಯಾಗುತ್ತಿದೆ! ಬೆಟ್ಟದ ಉಸ್ತುವಾರಿ ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆ ತೆಕ್ಕೆಗೆ ಜಾರುತ್ತಿದ್ದಂತೆ ತಾಣದಲ್ಲಿ ರೋಪ್ ವೇ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಚುರುಕುಗೊಂಡಿರುವ ನಡುವೆ ಹೊಸ ನೀತಿಗಳ ಜಾರಿ, ವ್ಯವಸ್ಥೆಗಳಿಗೆ ದುಬಾರಿ ಶುಲ್ಕ ನಿಗದಿಪಡಿಸಿರುವುದು ಪ್ರವಾಸಿಗರ ಜೇಬಿಗೆ ಕತ್ತರಿ ಬೀಳಲಿದೆ.
ಹೊಸ ನೀತಿಗಳ ಜಾರಿಯಿಂದಾಗಿ ಕುಟುಂಬ ಸದಸ್ಯರೊಂದಿಗೆ ಒಂದು ದಿನ ಕಳೆಯಲು ಬರುವವರು ಪ್ರವೇಶ ಶುಲ್ಕ, ವಾಹನ ಪಾರ್ಕಿಂಗ್, ಬಾಡಿಗೆ ಶುಲ್ಕ, ತಿಂಡಿ-ಊಟ, ತಂಪು ಪಾನಿಯಗಳಿಗೆ ಸಾವಿರಾರು ರೂ. ಹಣ ವ್ಯಯಿಸಬೇಕಾಗಿದೆ. ಇಲ್ಲಿ ಎಲ್ಲವೂ ಹಂತ ಹಂತವಾಗಿ ದುಬಾರಿಯಾಗುತ್ತಿದೆ.
ನೆಹರು ನಿಲಯದಲ್ಲಿ ವಿವಿಐಪಿ ವಸತಿ ಗೃಹಗಳು, ಗಾಂಧಿ ನಿಲಯದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಸತಿ ಗೃಹಗಳಿವೆ. ಇಲ್ಲಿ ಒಂದು ದಿನ ತಂಗಲು ಕನಿಷ್ಠ 2 ಸಾವಿರ ರೂ.ದಿಂದ 6 ಸಾವಿರ ರೂ. ಪಾವತಿಸಬೇಕಿದೆ, ಗಿರಿಧಾಮದ ಪ್ರವೇಶ ಶುಲ್ಕ, ಟೋಕನ್‌ಗಾಗಿ ಕಾಯುವುದು, ಇಲ್ಲಿನ ಹೋಟೆಲ್‌ನಲ್ಲಿ ತಿಂಡಿ-ತಿನಿಸುಗಳು ಗಗನಮುಖಿಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ದುಬಾರಿ ದುನಿಯಾದಿಂದಾಗಿ ಗಿರಿ ಸುತ್ತಲು ಹಿಂದೆ ಮುಂದೆ ನೋಡುವಂತಾಗಿದೆ.
ದಿನಕ್ಕೆ ವಸತಿ ಗೃಹ ದರ : ಸಾಮಾನ್ಯ 2 ಸಾವಿರ ರೂ., ವಿಐಪಿ, ವಿವಿಐಪಿ 4 ಸಾವಿರ ರೂ.ದಿಂದ 5 ಸಾವಿರ ರೂ., ವಾರಾಂತ್ಯಗಳಲ್ಲಿ 6 ಸಾವಿರ ರೂ.
ತಿಂಡಿ-ತಿನಿಸಿನ ದರ: ಕಾಫಿ-ಟೀ: 20 ರೂ., ಇಡ್ಲಿ-ವಡಾ: 80 ರೂ., ಮಸಾಲೆ ದೋಸೆ: 80 ರೂ., ಉದ್ದಿನ ವಡೆ: 80 ರೂ., ರೈಸ್ ಬಾತ್: 120 ರೂ. ನಿಗದಿ ಮಾಡಲಾಗಿದೆ.
ಟೋಕನ್ ವ್ಯವಸ್ಥೆಗೆ ಅಪಸ್ವರ : ಗಿರಿಧಾಮದಲ್ಲಿ ಪ್ರವಾಸಿಗರ ಹಾಗೂ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಜಾರಿಗೊಳಿಸುತ್ತಿರುವ ಟೋಕನ್ ವ್ಯವಸ್ಥೆಗೆ ಅಪಸ್ವರ ಕೇಳಿಬರುತ್ತಿವೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಇತ್ತ ಬಾರದಂತೆ ಮಾಡುವ ಹುನ್ನಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಗಿರಿಧಾಮದ ಮೇಲಿರುವ ವಾಹನ ನಿಲ್ದಾಣದಲ್ಲಿ ಪ್ರಸ್ತುತ 310 ಕಾರು, 550 ದ್ವಿಚಕ್ರ ವಾಹನಗಳ ಪಾಕಿರ್ಂಗ್, ಬೆಟ್ಟದ ಕೆಳಭಾಗದಲ್ಲಿ 350 ಕಾರು ಹಾಗೂ 200 ದ್ವಿಚಕ್ರ ವಾಹನ ಪಾಕಿರ್ಂಗ್ ಮಾಡಬಹುದಾಗಿದೆ. ಇದಕ್ಕೆ ಅನುಗುಣವಾಗಿ ಆನ್‌ಲೈನ್ ಮತ್ತು ಆಫ್ಲೈನ್ ಮೂಲಕ ತಲಾ ಶೇ.50 ಟೋಕನ್ ನೀಡಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ರೂಪಿಸಿದೆ. ಈ ನಿಯಮ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಉಪಯುಕ್ತವಾಗಿದೆ. ಆದರೆ ಶಾಶ್ವತವಾಗಿ ಇದನ್ನೇ ಜಾರಿಗೊಳಿಸುತ್ತಿರುವುದು ಬೇಸರಕ್ಕೆ ಕಾರಣವಾಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಂಡು ಸೀಮಿತ ಸಂಖ್ಯೆಯಲ್ಲಿ ಜನರಿಗೆ ಪಾಸ್ ನೀಡಿ ಒಳ ಬಿಡಲಾಗುತ್ತದೆ ಎನ್ನುವುದೇ ಅವೈಜ್ಞಾನಿಕ. ದೂರದಿಂದ ಬರುವ ಪ್ರವಾಸಿಗರು ಗಂಟೆಗಟ್ಟಲೆ ಕಾಯುವ ಇಲ್ಲವೇ ಬೇರೆ ಪ್ರವಾಸಿ ತಾಣಗಳ ವೀಕ್ಷಣೆ ಹೋಗಬೇಕಾಗುತ್ತದೆ, ಇಷ್ಟೇ ಅಲ್ಲದೆ ಟೋಕನ್ ಸಿಗದ ಬೇಸರದಲ್ಲಿ ಮತ್ತೆ ಗಿರಿಯತ್ತ ಸುಳಿಯದ ಮನೋಭಾವವೂ ಮೂಡುತ್ತದೆ.
ನಂದಿ ಗಿರಿಧಾಮದಲ್ಲಿ ಜನ ಮತ್ತು ವಾಹನ ದಟ್ಟಣೆ ನಿಯಂತ್ರಣಕ್ಕೆ ಆಫ್ಲೈನ್ ಮತ್ತು ಆನ್‌ಲೈನ್ ಮೂಲಕ ಟೋಕನ್ ವಿತರಣೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆರ್.ಲತಾ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಇಲ್ಲಿನ ಪರಿಸರಕ್ಕೆ ಮನಸೋತು ಪ್ರತಿವಾರ ಗೆಳೆಯರೊಂದಿಗೆ ಭೇಟಿ ನೀಡುವುದು ರೂಢಿಯಾಗಿದೆ. ಆದರೆ, ಇಲ್ಲಿ ಇತ್ತೀಚೆಗೆ ದುಬಾರಿ ದರ, ಟೋಕನ್ ವ್ಯವಸ್ಥೆ ಸೇರಿ ಹೊಸ ನೀತಿಗಳ ಕಿರಿಕಿರಿಯಿಂದ ಪ್ರವಾಸಕ್ಕೆ ಬೇರೆ ಸ್ಥಳವನ್ನು ನೋಡಿಕೊಳ್ಳಬೇಕಾಗಿದೆ. ನಂಜುಂಡಚಾರ್, ಪ್ರವಾಸಿ ವಾಹನಗಳಿಗೆ ಮಾತ್ರ ಟೋಕನ್ ವಿತರಿಸಿ ಪ್ರವೇಶಕ್ಕೆ ಅನುಮತಿ ನೀಡುವುದೇನೂ ಸರಿ. ಆದರೆ, ಜನರಿಗೆ ಅಗತ್ಯವಿಲ್ಲ. ಒಂದು ವೇಳೆ ಪಾಸ್ ಸಿಗದಿದ್ದಲ್ಲಿ ವಾಪಸ್ ಹೋಗಬೇಕಾಗುತ್ತದೆ ಇಲ್ಲವೇ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಅದರ ಬದಲು ಹಿಂದಿನ ಮಾದರಿಯಲ್ಲಿ ಎಲ್ಲರನ್ನೂ ಬಿಡುವಂತಾಗಬೇಕು. ಸುಪ್ರಿಯಾ, ಪ್ರವಾಸಿ