

ಚಿಕ್ಕಬಳ್ಳಾಪುರ: ಮುಂಜಾಗ್ರತಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಡಿ.31ರ ಸಂಜೆ 6ರಿಂದ ಜನವರಿ 1ರ ಬೆಳಗ್ಗೆ 7ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಅವಘಡ ಸಂಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತವು ಪ್ರತಿವರ್ಷದಂತೆ ನಿಗದಿತ ಅವಧಿಯಲ್ಲಿ ಪ್ರವಾಸಿಗರು ಮತ್ತು ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ನಂದಿ ಗಿರಿಧಾಮವೂ ಒಂದು. ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಹೊಸ ವರ್ಷಾಚರಣೆ, ಪ್ರೇಮಿಗಳ ದಿನ, ಕ್ರಿಸ್‌ಮಸ್‌ನಂತಹ ವಿಶೇಷ ದಿನಗಳಲ್ಲಿ ದಟ್ಟಣೆ ಹೆಚ್ಚಾಗಿರುತ್ತದೆ. ಇದರ ನಡುವೆ ಇಲ್ಲಿನ ಟಿಪ್ಪುಡ್ರಾಪ್, ಗಿರಿಧಾಮ ಮೆಟ್ಟಿಲು, ಇಳಿಜಾರು ಅರಣ್ಯ ಪ್ರದೇಶ ಸೇರಿ ಅಪಾಯಕಾರಿ ಸ್ಥಳಗಳ ನಡುವೆ ಆಗಾಗ ಆತ್ಮಹತ್ಯೆ, ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಾರ್ಟಿ, ಮೋಜು ಮಸ್ತಿಗೆ ಕಡಿವಾಣ ಹಾಕಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶ ದ್ವಾರದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿದ್ದು ಬೆಟ್ಟದಲ್ಲಿ ಪೊಲೀಸ್, ಗೃಹರಕ್ಷಕ ದಳ ಮತ್ತು ಪ್ರವಾಸಿ ಮಾರ್ಗದರ್ಶಿ ಸಿಬ್ಬಂದಿ ನಿಯೋಜಿಸಲಾಗಿದೆ.
ಖಾಸಗಿ ರೆಸಾರ್ಟ್ ಅವಲಂಬನೆ
ಡಿ.31ರ ಸಂಜೆ 6ರಿಂದ ಜ.1ರ ರಾತ್ರಿ 11ರವರೆಗೂ ಗಿರಿಧಾಮದಲ್ಲಿನ ಅತಿಥಿ ಗೃಹಗಳಲ್ಲಿನ ಕೊಠಡಿ ಬುಕ್ಕಿಂಗ್‌ಗೂ ಅವಕಾಶ ಇರುವುದಿಲ್ಲ. ಬಾಡಿಗೆ ಪಡೆದವರು ನಿಯಮ ಉಲ್ಲಂಸಿ ರಾತ್ರಿ ವೇಳೆ ಬೆಟ್ಟದಲ್ಲಿ ಸುತ್ತಾಡುವ, ಮೋಜು ಮಸ್ತಿ ಪಾರ್ಟಿ ಹೆಸರಿನಲ್ಲಿ ಕುಣಿದಾಡಿ, ಅವಘಡಗಳಿಗೆ ಎಡೆಮಾಡಿ ಕೊಡುವುದನ್ನು ತಪ್ಪಿಸುವ ಉದ್ದೇಶದಿಂದ ಕೊಠಡಿ ಬುಕ್ಕಿಂಗ್ ಮಾಡಿಕೊಳ್ಳುತ್ತಿಲ್ಲ. ಇದು ಬೆಟ್ಟದ ತಪ್ಪಲಿನ ಖಾಸಗಿ ರೆಸಾರ್ಟ್‌ಗಳಿಗೆ ಲಾಭದಾಯಕವಾಗಿದ್ದು, ದೇವನಹಳ್ಳಿ-ಕಾರಹಳ್ಳಿ, ನಂದಿ ಕ್ರಾಸ್-ಗಿರಿಧಾಮ ಮಾರ್ಗದಲ್ಲಿ 15 ರೆಸಾರ್ಟ್‌ಗಳಿವೆ. ಇಲ್ಲಿ ವಿವಿಧ ಭಾಗಗಳಿಂದ ಪ್ರವಾಸಿಗರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದು, ಖಾಸಗಿಯಾಗಿ ಹೊಸ ವರ್ಷಾಚರಣೆಗಳು ನಡೆಯಲಿವೆ. ಟೆಕ್ಕಿಗಳು, ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿ ಹಲವರು ತಂಡೋಪತಂಡವಾಗಿ ಆಗಮಿಸಲಿದ್ದು ರಾತ್ರಿ 12ರ ವೇಳೆ ಪಾರ್ಟಿ ಮುಗಿಸಿ, ಮರುದಿನ ಬೆಳಗ್ಗೆ ನಂದಿ ಗಿರಿಧಾಮದಲ್ಲಿ ಸುತ್ತಾಡಿ ಮತ್ತೆ ತಮ್ಮೂರುಗಳಿಗೆ ಮರಳುವುದು ವಾಡಿಕೆ.
ರಾತ್ರಿ ಮಾತ್ರ ನಿಷೇಧ
ಹೊಸ ವರ್ಷದ ದಿನದ ರಾತ್ರಿ 12ರ ಕ್ಷಣದ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ, ಜ.1ರ ಬೆಳಗ್ಗೆ 7ರ ಬಳಿಕ ಪ್ರವಾಸಿಗರು ಎಂದಿನಂತೆ ಗಿರಿಧಾಮಕ್ಕೆ ತೆರಳಲು ಅವಕಾಶ ಇರಲಿದೆ. ಪ್ರವಾಸೋದ್ಯಮ ಇಲಾಖೆ, ಖಾಸಗಿ ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ತಿಂಡಿ ತಿನಿಸು ವ್ಯವಸ್ಥೆಯೂ ಇರುತ್ತದೆ.
"ಮುಂಜಾಗ್ರತಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಡಿ.31ರ ಸಂಜೆ 6 ರಿಂದ ಜ.1ರ ಬೆಳಗ್ಗೆ 7ರವರೆಗೆ ಪ್ರವಾಸಿಗರು ಮತ್ತು ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಹಾಗೆಯೇ ನಿಗದಿತ ಅವಧಿಯಲ್ಲಿ ಅತಿಥಿ ಗೃಹಗಳ ಕೊಠಡಿ ಬುಕ್ಕಿಂಗ್‌ಗೂ ಅವಕಾಶವಿಲ್ಲ." - ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ