

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ
ಜಿಲ್ಲೆಯ ಕೀರ್ತಿಗೆ ಕಳಶಪ್ರಾಯದಂತಿರುವ ಪುರಾತನ ನಂದಿಯ ಭೋಗನಂದೀಶ್ವರಸ್ವಾಮಿ ಆಲಯ ಮತ್ತು ನಂದಿ ಬೆಟ್ಟದ ಯೋಗನಂದೀಶ್ವರ ಸ್ವಾಮಿ ದೇವಾಲಯದ ನಿರ್ವಹಣೆಯನ್ನು ಚಿಕ್ಕಬಳ್ಳಾಪುರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಭಾಗಕ್ಕೆ ಒಪ್ಪಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಂದಿ ದೇಗುಲದ ದೈನಂದಿನ ಆಡಳಿತ ನಿರ್ವಹಣೆ ಜವಾಬ್ದಾರಿಯನ್ನು ದೊಡ್ಡಬಳ್ಳಾಪುರದ ಎಸ್.ಎಸ್.ಘಾಟಿ ಸುಬ್ರಮಣ್ಯ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ವಹಿಸಿರುವುದಾಗಿ ಹಿಂದು ಧಾರ್ಮಿಕ ದತ್ತಿ ಇಲಾಖೆಯು ಆಯುಕ್ತರು ಕಳೆದ ಜು.18ರಂದು ಹೊರಡಿಸಿರುವ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಅಧಿಕಾರ ಹೊಣೆಯು ಜಿಲ್ಲೆಯಿಂದ ಅನ್ಯ ಜಿಲ್ಲೆಗೆ ಹಸ್ತಾಂತರಗೊಂಡಂತಾಗಿದೆ.
ಹಸ್ತಾಂತರಕ್ಕೆ ಕ್ಷುಲ್ಲಕ ಕಾರಣ: ಜವಾಬ್ದಾರಿಯ ವರ್ಗಾವಣೆಗೆ ಚಿಕ್ಕಬಳ್ಳಾಪುರದಲ್ಲಿನ ಅಧಿಕಾರಿಗಳಿಗೆ ಕೆಲಸದ ಒತ್ತಡ ಮಿತಿ ಮೀರಿದೆ ಎಂಬುದು ಕ್ಷುಲ್ಲಕ ಕಾರಣವಾಗಿದೆ. ಹಿಂದೆ ಇಲ್ಲಿನ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮತ್ತು ಮುಜರಾಯಿ ಇಲಾಖೆಯು ಪೂಜಾ ಕಾರ್ಯಕ್ರಮ, ಹುಂಡಿ ನಿರ್ವಹಣೆ ಮತ್ತು ಅನುದಾನ ಬಳಕೆಗೆ ಸಂಬಂಧಿಸಿದಂತೆ ಉಸ್ತುವಾರಿ ವಹಿಸಿಕೊಂಡಿತ್ತು. ಆದರೆ, ಜಿಲ್ಲಾ ಕೇಂದ್ರದಲ್ಲಿ ಇತರ ಆಡಳಿತಾತ್ಮಕ ಕೆಲಸಗಳು, ವಿವಿಧ ದೇವಾಲಯಗಳ ಮೇಲೆ ನಿಗಾ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಒತ್ತಡ ಹೆಚ್ಚಾಗಿದೆ. ಇದಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ವಹಣೆ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸಬೇಕು ಎಂದು ತಹಸೀಲ್ದಾರ್ ಪತ್ರ ಬರೆದಿದ್ದರು. ಇದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿಗಳು ಕಳೆದ ಮೇ.7ರಂದು ಧಾರ್ಮಿಕ ದತ್ತಿ ಇಲಾಖೆಗೆ ಶಿಫಾರಸು ಮಾಡಿದ್ದರು. ಇದೆಲ್ಲ ಪ್ರಕ್ರಿಯೆಯೂ ಸ್ಥಳೀಯರ ಅಭಿಪ್ರಾಯಕ್ಕೆ ಆದ್ಯತೆ ನೀಡದೆ ನಡೆದಿದ್ದು, ಇದೀಗ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಆಲಯ ಸಂರಕ್ಷಿತ ಸ್ಮಾರಕ: ಹಲವು ಶತಮಾನಗಳ ಹಿಂದೆ ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ನಂದಿಯ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಇದರ ನಿರ್ವಹಣೆಯನ್ನು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮುಜರಾಯಿ ಇಲಾಖೆ ಜಂಟಿಯಾಗಿ ನೋಡಿಕೊಳ್ಳುತ್ತಿವೆ. ಜಿಲ್ಲಾ ಕೇಂದ್ರದಿಂದ ಕೇವಲ 6 ಕಿ.ಮೀ ಇದೆ. ನಂದಿ ಗಿರಿಧಾಮದಲ್ಲಿ ಯೋಗನಂದೀಶ್ವರ ಸ್ವಾಮಿ ಮತ್ತು ಬೆಟ್ಟದ ತಪ್ಪಲಿನ ನಂದಿ ಗ್ರಾಮದಲ್ಲಿ ಭೋಗನಂದೀಶ್ವರ ಸ್ವಾಮಿ ದೇವಾಲಯವಿದೆ. ಇಲ್ಲಿನ ಕಲೆ ಮತ್ತು ವಾಸ್ತು ಶಿಲ್ಪವು ಕಲ್ಲು ಅರಳಿ ಹೂವಾಗಿದೆ ಎಂಬ ಭಾವನೆ ಮೂಡಿಸುತ್ತವೆ. ಗ್ರಾಮದ ಆಲಯವು ದ್ರಾವಿಡ ಶೈಲಿಯಲ್ಲಿದ್ದು, ರತ್ನಾವಳಿ ರಾಜವಂಶದ ಬಾಣನಿಂದ ನಿರ್ಮಿಸಲ್ಪಿಟ್ಟಿದೆ ಎಂದು ಇತಿಹಾಸ ಹೇಳುತ್ತದೆ. ಶ್ರೀ ಅರುಣಚಲೇಶ್ವರಸ್ವಾಮಿ ದೇವಾಲಯ ಬಳಪದ ಕಲ್ಲಿನಿಂದ ನಿರ್ಮಾಣವಾಗಿದೆ. ಈ ಆಲಯದಲ್ಲಿ ಗಂಗ, ಚೋಳರು, ಹೊಯ್ಸಳರ ವಾಸುಶಿಲ್ಪ ಕಾಣುತ್ತದೆ. ಕಲ್ಲಿನ ಕಲ್ಯಾಣ ಮಂಟಪ ಮತ್ತು ಕೆತ್ತನೆಯ ಕಂಬಗಳು, ಶೃಂಗತೀರ್ಥ ಗಮನ ಸೆಳೆಯುತ್ತವೆ.
ನಿರ್ಧಾರಕ್ಕೆ ಅಸಮಾಧಾನ: ಕಳೆದ ಒಂದೂವರೆ ದಶಕದ ಹಿಂದೆಯೂ ದೇವಾಲಯದ ಉಸ್ತುವಾರಿಯನ್ನು ಘಾಟಿ ಸುಬ್ರಮಣ್ಯ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಒಪ್ಪಿಸಲಾಗಿತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಆಲಯ ಮತ್ತು ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದಂತೆ ನಾನಾ ಸಮಸ್ಯೆಗಳು ಸೃಷ್ಟಿಯಾಗಿದ್ದವು. ಇದೀಗ ಮತ್ತೆ ಭಕ್ತರ ವಿರೋಧದ ನಡುವೆಯೂ ಮತ್ತೆ ಹಳೇ ನಿರ್ಧಾರ ಕೈಗೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ವಿಶೇಷ ಆಚರಣೆಗಳಿಗೆ ಹೆಸರುವಾಸಿ: ಕಲೆ ಮತ್ತು ವಾಸುಶಿಲ್ಪಕ್ಕೆ ಹೆಸರುವಾಸಿಯಾಗಿರುವ ದೇವಾಲಯದಲ್ಲಿ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ಜಾತ್ರೆಯನ್ನು ಪ್ರತಿ ವರ್ಷ ಅದ್ದೂರಿಯಾಗಿ ಕೈಗೊಳ್ಳಲಾಗುತ್ತದೆ. ಕಾರ್ತಿಕ ಮಾಸ, ಮಹಾಶಿವರಾತ್ರಿ, ಆಷಾಢ ಮಾಸ ಸೇರಿದಂತೆ ವಿವಿಧ ವಿಶೇಷ ದಿನಗಳಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರುತ್ತದೆ. ಇನ್ನು ಇಲ್ಲಿ ಮದುವೆಯಾದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆ ಇದೆ. ಇಲ್ಲಿಗೆ ರಾಜ್ಯ ಮಾತ್ರವಲ್ಲದೇ ಆಂಧ್ರ, ತಮಿಳುನಾಡು ಸೇರಿದಂತೆ ಹಲವೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ದೇವರಿಗೆ ಪೂಜೆ ಸಲ್ಲಿಸಿ ಹರಕೆಯನ್ನು ತೀರಿಸುತ್ತಾರೆ. ವಿಶೇಷ ಆಚರಣೆಗಳು ಮತ್ತು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪ್ರತಿ ವರ್ಷ ಹುಂಡಿಗೆ ಹೆಚ್ಚಿನ ಹಣ ಸಂಗ್ರಹವಾಗುತ್ತದೆ.
ನಂದಿಯ ದೇಗುಲದ ದೈನಂದಿನ ನಿರ್ವಹಣೆಯ ಜವಾಬ್ದಾರಿಯನ್ನು ಚಿಕ್ಕಬಳ್ಳಾಪುರದ ಬದಲಿಗೆ ದೊಡ್ಡಬಳ್ಳಾಪುರದ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದು ಸರಿಯಲ್ಲ. ಕೂಡಲೇ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ.ಯಲುವಹಳ್ಳಿ ಸೊಣ್ಣೇಗೌಡ, ಹೋರಾಟಗಾರ
ಆಡಳಿತಾತ್ಮಕ ಹಿತದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಚಿಕ್ಕಬಳ್ಳಾಪುರದ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ಮತ್ತು ಯೋಗನಂದೀಶ್ವರ ಸ್ವಾಮಿ ದೇವಾಲಯದ ದೈನಂದಿನ ಆಡಳಿತ ನಿರ್ವಹಣೆಯನ್ನು ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸಿದ್ದಾರೆ.ಎಚ್.ಅಮರೇಶ್, ಎಡಿಸಿ ಚಿಕ್ಕಬಳ್ಳಾಪುರ