

ಶ್ರವಣ್‌ಕುಮಾರ್ ನಾಳ ಪುತ್ತೂರು
150ಕ್ಕೂ ಅಧಿಕ ವರ್ಷದಿಂದ ಚಿಕ್ಕಪುತ್ತೂರು ಕೃಷಿ ಪ್ರದೇಶಕ್ಕೆ ನೈಸರ್ಗಿಕ ನೀರು ಸರಬರಾಜಾಗುತ್ತಿದ್ದ ನಂದಿಲ ರಾಜಕಾಲುವೆ ನೀರಿನ ಹರಿಯುವಿಕೆಗೆ ತಡೆಯೊಡ್ಡಿದ್ದರಿಂದ ಒಂಬತ್ತು ಕುಟುಂಬಗಳ 15 ಎಕರೆ ನಾಟಿ ಮಾಡಿದ ಗದ್ದೆ ನೀರಿಲ್ಲದೆ ಬರಡಾಗುವ ಭೀತಿಯಲ್ಲಿದೆ.
ಪುತ್ತೂರಿನ ಆದರ್ಶ ರೈಲು ನಿಲ್ದಾಣದಿಂದ 50 ಮೀಟರ್ ದೂರವಿರುವ ಚಿಕ್ಕಪುತ್ತೂರು ಪ್ರದೇಶ ಗ್ರೀನ್‌ಜೋನ್ ವ್ಯಾಪ್ತಿಯಲ್ಲಿದ್ದು, ಇಲ್ಲಿ ಭತ್ತ ಬೆಸಾಯ ಮಾಡಲಾಗುತ್ತಿದೆ. ಪ್ರಸ್ತುತ 25 ಎಕರೆ ವ್ಯಾಪ್ತಿಯಲ್ಲಿ 15 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಗದ್ದೆಯಿದ್ದು, ಇಲ್ಲಿಗೆ ನಂದಿಲ ರಾಜಕಾಲುವೆಯಿಂದಲೇ ನೀರು ಹರಿದುಬರುತ್ತಿದೆ. ಆದರೆ ಈ ಪ್ರದೇಶಕ್ಕೆ ಸಂಬಂಧಪಡದ ಖಾಸಗಿ ವ್ಯಕ್ತಿಯೋರ್ವ ರಾಜಕಾಲುವೆಯಿಂದ ಕವಲಾಗಿ ಮೋರಿಯ ಮೂಲಕ ಹರಿಯುವ ನೀರಿಗೆ ತಡೆಯೊಡ್ಡಿದ್ದಾನೆ. ಮೋರಿಗೆ ಬಟ್ಟೆ, ಗೋಣಿಚೀಲ, ಮಣ್ಣು ತುಂಬಿದ್ದರಿಂದ ನೀರು ಹರಿಯದೆ ಭತ್ತ ಬೇಸಾಯಕ್ಕೆ ತೊಂದರೆಯಾಗಿದೆ.
ರಾಜಕಾಲುವೆ ವಿವೇಕಾನಂದ ಕಾಲೇಜಿನಿಂದ ಆರಂಭವಾಗಿ ಪುತ್ತೂರಿನ ಆದರ್ಶ ರೈಲು ನಿಲ್ದಾಣ, ಚಿಕ್ಕಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಹರಿದು ನಗರದಲ್ಲಿರುವ ಏಳ್ಮುಡಿ ತೋಡಿಗೆ ಸಂಪರ್ಕ ಹೊಂದಿದೆ. ಚಿಕ್ಕಪುತ್ತೂರು ವ್ಯಾಪ್ತಿಯಲ್ಲಿ ಈ ನೀರು ವಿಶಾಲ ಕೃಷಿಭೂಮಿ ಮೂಲಕ ಹರಿಯುವುದರಿಂದ ವಾಸನೆ, ಸೊಳ್ಳೆ ಕಾಟವಿದೆ ಎಂದು ಸ್ಥಳೀಯ ನಿವಾಸಿ ಈ ಕಾಲುವೆ ನೀರಿನ ಹರಿಯುವಿಕೆಯನ್ನು ಬಂದ್ ಮಾಡಿದ್ದಾರೆ ಎಂದು ಕೃಷಿಕರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಒಣಗುತ್ತಿದೆ ಪೈರು: ನೀರಿಗೆ ತಡೆಯೊಡ್ಡಿದ್ದರಿಂದ 2 ದಿನಗಳಿಂದ ಚಿಕ್ಕಪುತ್ತೂರು ವ್ಯಾಪ್ತಿಯಲ್ಲಿ ನಾಟಿ ಮಾಡಿದ ಗದ್ದೆಗಳು ಒಣಗಿಹೋಗಿವೆ. ನೀರಿನ ಸರಾಗ ಹರಿಯುವಿಕೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಕೃಷಿಕರು ನಗರಸಭೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಕೃಷಿಕರ ಆರೋಪ.
150ಕ್ಕೂ ಅಧಿಕ ವರ್ಷದಿಂದ ಚಿಕ್ಕಪುತ್ತೂರು ಕೃಷಿ ಪ್ರದೇಶಕ್ಕೆ ನೈಸರ್ಗಿಕ ನೀರು ಸರಬರಾಜಾಗುತ್ತಿದ್ದು, ಈ ನೀರಿನ ಮೂಲಕವೇ ಚಿಕ್ಕಪುತ್ತೂರಿನ ಗದ್ದೆಗಳಲ್ಲಿ ಬೇಸಾಯ ನಡೆಸಲಾಗುತ್ತಿತ್ತು. ಆದರೆ ನಂದಿಲ ರಾಜಕಾಲುವೆಯಿಂದ ಬರುವ ನೀರಿಗೆ ವ್ಯಕ್ತಿಯೋರ್ವ ತಡೆಯೊಡ್ಡಿದ್ದರಿಂದ 15 ಎಕರೆ ನಾಟಿ ಮಾಡಿದ ಗದ್ದೆಗೆ ನೀರಿಲ್ಲದಂತಾಗಿದೆ.
ಅಂಗಾರ ಪಿ. ಚಿಕ್ಕಪುತ್ತೂರು, ಕೃಷಿಕ
ಯಾವುದೇ ರಾಜಕಾಲುವೆಗಳಿಗೆ ತಡೆ, ಮುಚ್ಚುವುದು ಅಪರಾಧ. ಚಿಕ್ಕಪುತ್ತೂರು ವ್ಯಾಪ್ತಿಯ ರಾಜಕಾಲುವೆಯ ಸ್ಥಳ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ರಾಜಕಾಲುವೆ ಅತಿಕ್ರಮಣ, ನೀರಿನ ಹರಿಯುವಿಕೆಗೆ ತೊಂದರೆಯಾಗಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು.
ರೂಪಾ ಶೆಟ್ಟಿ, ಪೌರಾಯುಕ್ತರು, ಪುತ್ತೂರು ನಗರಸಭೆ