

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಹಿಂದು ದೇವಾಲಯದ ಜಾತ್ರೆಯಲ್ಲಿ ಜಾತಿ, ಮತ, ಭೇದವಿಲ್ಲದೆ ಹಿಂದುಗಳ ಜತೆಯಲ್ಲಿ ಕ್ರೈಸ್ತರು ದೇವರ ಸನ್ನಿಧಿಯಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿದ್ದು, ನಂದಳಿಕೆ ಸಿರಿ ಜಾತ್ರೆ ಸೌಹಾರ್ದತೆಯ ಜಾತ್ರೆಯಾಗಿ ಮೆರೆಯುತ್ತಿದೆ.
ಇತಿಹಾಸ ಪ್ರಸಿದ್ಧ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರತಿವರ್ಷ ಜರುಗುವ ಸಿರಿಜಾತ್ರೆಗೆ ಊರ ಹಾಗೂ ಪರಊರಿನಿಂದ 1500ಕ್ಕೂ ಅಧಿಕ ಮಂದಿಯ ಸ್ವಯಂಸೇವಕರ ತಂಡ ಸಿದ್ಧವಾಗುತ್ತದೆ. ಸಿರಿಜಾತ್ರೆಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಪ್ರತಿ ನಿತ್ಯ ಹಗಲು -ರಾತ್ರಿ ವಿವಿಧ ಸ್ವಯಂಸೇವಕರ ತಂಡ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾರೆ.
ಪ್ರತಿ ವರ್ಷವೂ 40ಕ್ಕೂ ಅಧಿಕ ಮಂದಿ ಕ್ರೈಸ್ತ ಪುರುಷರು, ಮಹಿಳೆಯರು ನಂದಳಿಕೆ ಸಿರಿಜಾತ್ರೆಯಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ. ಬೆಳ್ಮಣ್ ನಿವಾಸಿ ಅನಿತಾ ಡಿಸೋಜ ಹಲವು ವರ್ಷಗಳಿಂದ ದೇವರಿಗೆ ಮಲ್ಲಿಗೆ ಹೂವು ಸಮರ್ಪಿಸುತ್ತಿದ್ದು, ದೇವರ ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ನಂದಳಿಕೆ ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಜೋಯ್ಸ ಟೆಲ್ಲಿಸ್ ಹಾಗೂ ಅವರ ಮಹಿಳಾ ತಂಡ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ.
ನಂದಿ ಹಿಡಿಯುವ ಕ್ರೈಸ್ತ ಯುವಕ
ದೇವಾಲಯದ ಜಾತ್ರೆ ಹಾಗೂ ದೇವರ ಬಲಿ ಪೂಜೆಯ ಸಂದರ್ಭ ದೇವರ ನಂದಿಯನ್ನು ಹಿಡಿಯುವುದು ಓರ್ವ ಕ್ರೈಸ್ತ ಸಮುದಾಯದ ಯುವಕ. ನಂದಳಿಕೆ ಕಂಪೊಟ್ಟು ನಿವಾಸಿ ವಿಕ್ಟರ್ ನೊರೊನ್ಹ ನಿಷ್ಠೆಯಿಂದ 11 ವರ್ಷದಿಂದ ಈ ಸೇವೆ ಮಾಡುತ್ತಿದ್ದಾರೆ. ನಂದಳಿಕೆ ಶ್ರೀಕಾಂತ್ ಭಟ್ ಅವರ ಗೂಳಿಯನ್ನು ತಂದು ತಾನೇ ಸ್ವತಃ ಸಾಕುತ್ತಿದ್ದು, ದೇವಾಲಯದಲ್ಲಿ ದೇವರ ಉತ್ಸವ ಬಲಿ, ಅಂಬೋಡಿ ಬಲಿ, ಹೀಗೆ ದೇವರ ಬಲಿ ಸೇವೆಯಲ್ಲಿ ಬಲಿ ಮೂರ್ತಿಯ ಎದುರು ನಂದಿ ಹಿಡಿಯುವ ಕಾಯಕ ಮಾಡುತ್ತಿದ್ದಾರೆ.
ದೇವಾಲಯದ ಲೆಕ್ಕಪತ್ರ ಬರೆಯುವ ಕೆಲಸದಲ್ಲಿ ಅಂಥೋನಿ ಮೆಂಡೋನ್ಸಾ ಹಾಗೂ ಬೆಳ್ಮಣ್ ಗ್ರಾಪಂ ಸದಸ್ಯ ಫೌಸ್ಟಿನ್ ಡಿಸೋಜ ಎಂಬುವರು ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ನಂದಳಿಕೆಯ ಗ್ರಾಮದ ಒಗ್ಗಟ್ಟು ಹಾಗೂ ಇಲ್ಲಿನ ಸರ್ವ ಧರ್ಮೀಯರ ಸೇವೆ ನಿಜಕ್ಕೂ ಇತರ ಗ್ರಾಮಗಳಿಗೆ ಮಾದರಿಯಾಗಿದೆ.
ನಂದಳಿಕೆ ದೇವಾಲಯದಲ್ಲಿ ದುಡಿಯುವುದು ತುಂಬಾ ಖುಷಿ ನೀಡುತ್ತದೆ. ಇಲ್ಲಿನ ಗ್ರಾಮಸ್ಥರ ಒಗ್ಗಟ್ಟು ನಮ್ಮನ್ನು ಸೇವೆ ಮಾಡುವಂತೆ ಸೆಳೆಯುತ್ತದೆ. ಧರ್ಮ ಬೇರೆಯಾದರೇನು. ದೇವರೊಬ್ಬನೇ ಎಂದು ಸೇವೆ ಮಾಡುತ್ತ ಬಂದಿದ್ದೇವೆ.
ಅನಿತಾ ಡಿಸೋಜ, ಮಾಜಿ ಗ್ರಾಪಂ ಸದಸ್ಯೆ ಬೆಳ್ಮಣ್
ದೇವರ ಸೇವೆ ಮಾಡುವುದರಲ್ಲಿ ಮನಸಿಗೆ ತೃಪ್ತಿಯಿದೆ. ಕಳೆದ ಸುಮಾರು 11 ವರ್ಷದಿಂದ ನಂದಿ ಹಿಡಿಯುವ ಕಾಯಕ ಮಾಡುತ್ತ ಬಂದಿದ್ದೇನೆ. ಮುಂದೆಯೂ ನಿರಂತರ ಮಾಡುತ್ತೇನೆ.
ವಿಕ್ಟರ್ ನೊರೊನ್ಹ ಕ್ರೈಸ್ತ ಯುವಕ
ನಮ್ಮ ಗ್ರಾಮದಲ್ಲಿ ಜಾತಿಮತ ಬೇಧವಿಲ್ಲದೆ ಸರ್ವಧರ್ಮಿಯರು ಜತೆಯಾಗಿ ಸಿರಿಜಾತ್ರೆಯ ಯಶಸ್ಸಿಗೆ ದುಡಿಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದು ಇತರ ಊರಿಗೂ ಮಾದರಿಯಾಗುವಂತಿದೆ.
ಎನ್.ಸುಹಾಸ್ ಹೆಗ್ಡೆ, ನಂದಳಿಕೆ ಚಾವಡಿ ಅರಮನೆ