

ಜಮಖಂಡಿ : ನಂದೇಶ್ವರ- ಮಧುರಖಂಡಿ ಕಮರಿಮಠದ ಶಿಕ್ಷಣ ಸಂಸ್ಥೆಯು ಮುಂಬರುವ ದಿನಗಳಲ್ಲಿ ಸಂಸ್ಕೃತ ಭಾಷೆ ಸಂಶೋಧನಾ ಕೇಂದ್ರ ಪ್ರಾರಂಭಿಸಲಿ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ. ವಿ. ಗಿರೀಶ ಚಂದ್ರ ಹೇಳಿದರು.
ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಸ್ವಾಮಿ ಅವರ 110ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಸಂಸ್ಕೃತ ಭಾಷೆ ಅಧಿಕ ಜನರು ಮಾತನಾಡುತ್ತಾರೆ. ಈ ಗ್ರಾಮವು ಮುಂಬರುವ ದಿನಗಳಲ್ಲಿ ಸಂಸ್ಕೃತ ಭಾಷೆ ಬಲ್ಲವರ ದಕ್ಷಿಣ ಕಾಶಿಯಾಗಲಿದೆ. ಇಲ್ಲಿ ಸಂಸ್ಕೃತ ಭಾಷೆ ಬೆಳಸುವಲ್ಲಿ ನಂದೇಶ್ವರ -ಮಧುರಖಂಡಿ ಕಮರಿಮಠದ ಡಾ. ದುಂಡೇಶ್ವರ ಸ್ವಾಮೀಜಿಯವರ ಪ್ರಯತ್ನ ಅಪಾರವಾಗಿದೆ ಎಂದರು.
ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಯೋಜನಾ ಸಹಾಯಕ ರಾಜಶೇಖರ ಕೆ.ಕೆ. ಮಾತನಾಡಿ, ಸಂಸ್ಕೃತ ಭಾಷೆ ಬೆಳೆಸುತ್ತಿರುವ ಶ್ರೀಮಠದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ನಂದೇಶ್ವರ-ಮಧುರಖಂಡಿ ಕಮರಿಮಠದ ದುಂಡೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸ್ಕೃತ ಭಾಷಾ ಬೆಳಗಾವಿ ವಲಯದ ವಿಷಯ ಪರಿವೀಕ್ಷಕ ಜಗದೀಶ ಕರಿಯಪ್ಪನವರ ಮಾತನಾಡಿದರು. ಆಧ್ಯಾತ್ಮಿಕ ಚಿಂತಕಪ್ರಭು ಪೂಜಾರಿ, ಶಿಕ್ಷಕ ಜಿ.ಟಿ. ಮಂಜುನಾಥ, ಹಣಮಂತ ಬಡಿಗೇರ, ಆರತಿ ಖೋತ ಮತ್ತಿತರರಿದ್ದರು.