ಇಂದಿನಿಂದ ನಂದಳಿಕೆ ವರ್ಷಾವಧಿ ಉತ್ಸವ

lakshmi
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಇತಿಹಾಸ ಪ್ರಸಿದ್ಧ ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇವಳದ ಶ್ರೀ ಲಕ್ಷ್ಮೀ ಜನಾರ್ದನ ದೇವರು ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಉತ್ಸವ ಏ.29ರಿಂದ ಮೇ 2ರವರೆಗೆ ನಡೆಯಲಿದೆ.

ಏ.29ರಂದು ಬೆಳಗ್ಗೆ 7.30ಕ್ಕೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ ನಾಂದಿ, ಪಂಚಗವ್ಯ ಹೋಮ, ಆದ್ಯ ಗಣಪತಿ ಯಾಗ ನಡೆಯಲಿದೆ. ಮಧ್ಯಾಹ್ನ 12ಕ್ಕೆ ನವಗ್ರಹ ಶಾಂತಿ, ಸಂಜೆ 4.30ರಿಂದ ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಳಿ ನಡೆಯಲಿದೆ.

30ರಂದು ಬೆಳಗ್ಗೆ 7.30ಕ್ಕೆ ಮೃತ್ಯುಂಜಯ ಯಾಗ, ಬಿಂಬ ಶುದ್ಧಿ, ವಾಯುಸ್ಥಿತಿ ಹೋಮ, ದುರ್ಗಾ ಹೋಮ, ದುರ್ಗಾ ಆಂಜನೇಯ ಕಲಶಾಭಿಷೇಕ ನಡೆಯಲಿದೆ. ಸಂಜೆ 4.30ರಿಂದ ಚಕ್ರಾಬ್ದ ಮಂಡಲ ಪೂಜೆ ದುರ್ಗಾ ಶಾಂತಿ ಹೋಮ, ಶಾಂತಿ ಪ್ರಾಯಶ್ಚಿತ್ತ ಹೋಮ, ದಿಶಾ ಹೋಮ ಅಷ್ಟಬಂಧ ಲೇಪನ ನಡೆಯಲಿದೆ.

ಮೇ 1ರಂದು ಬೆಳಗ್ಗೆ 8ರಿಂದ ತತ್ವ ಹೋಮ, ತತ್ವ ಕಲಶ, ನಾಗದೇವರ ಸಾನ್ನಿಧ್ಯದಲ್ಲಿ ಆಶ್ಲೇಷಾ ಬಲಿ ನಡೆಯಲಿದೆ. ಗಣಪತಿ ದೇವರ ಕಲಶ, ಶಾಂತಿ ಪ್ರಾಯಶ್ಚಿತ್ತ ಹೋಮ, ಸಂಜೆ ಬ್ರಹ್ಮ ಮಂಡಲ ರಚನೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ಮೇ 2ರಂದು ಬೆಳಗ್ಗೆ 10.14ಕ್ಕೆ ಶಿಬರೂರು ಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಶ್ರೀಲಕ್ಷ್ಮೀ ಜನಾರ್ದನ ದೇವರು ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಏ.29ರ ಸಂಜೆ 5ರಿಂದ ಅಬ್ಬನಡ್ಕ ನಂದಳಿಕೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನೆ, ಸಂಜೆ 6ರಿಂದ ಬೆಳ್ಮಣ್ ಜೇಸೀಸ್ ನೃತ್ಯ ಹಾಗೂ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ನಾಟ್ಯ ವೈವಿಧ್ಯ. 30ರಂದು ಸಂಜೆ 5ರಿಂದ ಅಬ್ಬನಡ್ಕ ನಂದಳಿಕೆ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಹಾಗೂ ಸಂಜೆ 6ರಿಂದ ನಂದಳಿಕೆ ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ. ಮೇ 1ರಂದು ಸಂಜೆ 6ರಿಂದ ಅಬ್ಬನಡ್ಕ ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯವರಿಂದ ಭಜನೆ, 2ರಂದು ಸಂಜೆ 4ಕ್ಕೆ ವಿಶಾಲ ಯಕ್ಷಕಲಾ ಬಳಗ ನಂದಳಿಕೆ ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 11ರಿಂದ ಕಲಾ ಸಂಗಮದ ಕಲಾವಿದರಿಂದ ‘ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಎನ್.ತುಕಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net