

ವಿಜಯವಾಣಿ ಸುದ್ದಿಜಾಲ ನಂದಗುಡಿ
ಗ್ರಾಮೀಣ ಪ್ರದೇಶಗಳಲ್ಲಿ ರೈತರ ಬದುಕು ಹಸನು ಮಾಡಲು ಹಾಗೂ ಆರ್ಥಿಕತೆಯಲ್ಲಿ ಸದೃಢತೆ ಸಾಧಿಸಲು ಉಪಕಸುಬಾದ ಹೈನುಗಾರಿಕೆ ವರದಾನವಾಗಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಸಿಮೂರ್ತಿ ಹೇಳಿದರು.
ಹೋಬಳಿಯ ನೆಲವಾಗಿಲು-ಸರಕನೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಸಂಘವು 2022-23ನೇ ಸಾಲಿನಲ್ಲಿ 14.84 ಲಕ್ಷ ರೂ. ಒಟ್ಟು ಲಾಭ, 7.76 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ರೈತರಿಗೆ ಈ ಬಾರಿ ಶೇ.3.48 ರೂ. ಬೋನಸ್ ಸಿಗಲಿದೆ ಎಂದರು.
ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಡಾ.ಸಂತೋಷ್‌ಕುಮಾರ್ ಮಾತನಾಡಿ, ಸರ್ಕಾರ ನೀಡುವ ಲೀ.5 ರೂ. ಪ್ರೋತ್ಸಾಹ ಧನ ಪಡೆಯಲು ಯಾವುದೇ ರಾಜಿಯಿಲ್ಲ. ಎಂಪಿಸಿಎಸ್, ಒಕ್ಕೂಟ, ಸರ್ಕಾರದ ತನಿಖಾ ತಂಡಗಳು ಯಾವಾಗ ಬೇಕಾದರೂ ಸಂಘಗಳಿಗೆ ಭೇಟಿ ನೀಡಿ ಹಾಲಿನ ಗುಣಮಟ್ಟ ಪರೀಕ್ಷಿಸಿ ಪ್ರೋತ್ಸಾಹಧನ ಪಡೆಯಲು ಅರ್ಹತೆ ಹೊಂದಬಹುದು ಎಂದರು.
2022-23ನೇ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಕೆ ಮಾಡಿದ ವೇದಾವತಿ, ಸತೀಶ್, ನಂಜಮ್ಮ, ಪಿಳ್ಳಪ್ಪ, ಜಯಮ್ಮ ಅವರನ್ನು ಸನ್ಮಾನಿಸಿ ಸಂಘಕ್ಕೆ ಹಾಲು ಸರಬರಾಜು ಮಾಡಿದ 92 ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಎಪಿಎಂಸಿ ಮಾಜಿ ನಿರ್ದೇಶಕ ಚಂದ್ರಮೋಹನ್, ಮಾಜಿ ಅಧ್ಯಕ್ಷ ಗಿರಿರಾಜ್, ನಿರ್ದೇಶಕರಾದ ಸುನೀಲ್, ಎಸ್.ಸಿ.ಬೀರಪ್ಪ, ಎಸ್.ಸಿ.ನಾರಾಯಣಸ್ವಾಮಿ, ದ್ಯಾವಮ್ಮ, ಎಂ.ಮುನಿಯಪ್ಪ, ಸಿಇಒ ಜಯಣ್ಣ, ಮಾಜಿ ಇಒ ಮುಕುಂದಗೌಡ, ಹಾಲು ಪರೀಕ್ಷಕ ಎನ್.ಡಿ.ಅನಿಲ್‌ಕುಮಾರ್, ಸಹಾಯಕ ಎನ್.ಎಂ.ಚಂದ್ರಪ್ಪ ಮುಖಂಡರಾದ ವೆಂಕಟರಾಜು, ನಂಜುಂಡೇಶ, ವಿಜಯೇಂದ್ರ, ಅಶೋಕ್, ಮುನಿರಾಮಯ್ಯ, ಕೃಷ್ಣಪ್ಪ ಇದ್ದರು.