

ವಿಜಯವಾಣಿ ಸುದ್ದಿಜಾಲ ನಂದಗುಡಿ
ಭಕ್ತಿಭಾವದಿಂದ ದೇವರ ಸ್ಮರಣೆ ಮಾಡಿದರೆ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಶ್ರೀ ಬೀರೇದೇವರ ಸೇವಾ ಟ್ರಸ್ಟ್ ಅಧ್ಯಕ್ಷ ಕೋಲಾರ ಮುನಿನಾರಾಯಣಪ್ಪ ತಿಳಿಸಿದರು.
ನಂದಗುಡಿಯ ನಲ್ಲೂರು ಬೀರೇಶ್ವರ, ವಡಿಗೇನಹಳ್ಳಿ ಬೀರೇಶ್ವರ, ಮೇಲೂರು ಭತ್ತೇಶ್ವರ ಹಾಗೂ ನಂದಗುಡಿ ಶ್ರೀ ಬೀರೇದೇವರ ಸೇವಾ ಟ್ರಸ್ಟ್‌ನಿಂದ ಆಯುಧ ಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ಹಮ್ಮಿಕೊಂಡಿದ್ದ ದೇವರ ಉತ್ಸವದಲ್ಲಿ ಮಾತನಾಡಿದರು.
ಪ್ರತಿನಿತ್ಯ ದೇವರ ಧ್ಯಾನ ಮಾಡುವ ಮೂಲಕ ಪ್ರತಿಯೊಬ್ಬರ ನಡೆ, ನುಡಿ, ಆಚಾರ-ವಿಚಾರ ಬದಲಾಗಬೇಕು. ಜೀವನದಲ್ಲಿ ಒಳ್ಳೆಯ ಕೆಲಸ ಮಾಡಬೇಕಾದರೆ ನಿರಂತರ ಪ್ರಯತ್ನ ಅಗತ್ಯವಾಗಿದೆ ಎಂದರು.
ನಂದಗುಡಿಯ ಬೀರೇದೇವರ ಗುಡಿ ಶಿಥಿಲಗೊಂಡಿದ್ದರಿಂದ ನೆಲಸಮ ಮಾಡಿದ್ದು, 4 ಕೋಟಿ ರೂ. ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ. ಭಕ್ತರು ಧನ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಮುಖಂಡ ಬಂಡೆ ಹೊಸೂರು ಸೋಮಣ್ಣ ಮಾತನಾಡಿದರು. ಮಂಗಳ ವಾದ್ಯಗಳೊಂದಿಗೆ ಪಟ್ಟದ ದೇವರನ್ನು ನಂದಗುಡಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ತದನಂತರ ನಾಲ್ಕೂ ದೇವರ ಒಕ್ಕಲಿನವರ ತಲೆ ಮೇಲೆ ಕಾಯಿ ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.