

ಎಂ.ರಾಮೇಗೌಡ ನಂದಗುಡಿ
ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ದಾಳಿಂಬೆ ಬೆಳೆಗಾರರಿಗೆ ಬೆಳೆಯಲ್ಲಿ ರೋಗ ಲಕ್ಷಣಗಳು ಕಂಡುಬರುತ್ತಿರುವುದು ನುಂಗಲಾರದ ತುತ್ತಾಗಿದೆ.
ಒಂದು ಎಕರೆಯಲ್ಲಿ ದಾಳಿಂಬೆ ಬೆಳೆಯಲು 4-5 ಲಕ್ಷ ರೂ.ವರೆಗೆ ಖರ್ಚು ತಗುಲುತ್ತದೆ. ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತರಿಗೆ ಹವಾಮಾನ ವೈಪರೀತ್ಯದಿಂದ ಕೊಳೆರೋಗ (ಅಂಥ್ರಾಕ್ನೋಸ್) ಕಂಡು ಬರುತ್ತಿದ್ದು, ಲಕ್ಷಾಂತರ ರೂ. ಖರ್ಚು ಮಾಡಿದ ರೈತನಿಗೆ ದಿಕ್ಕೇ ತೋಚದಂತಾಗಿದೆ.
ಹೊಸಕೋಟೆ ತಾಲೂಕಿನ ಸುಮಾರು 180 ಹೆಕ್ಟೇರ್ ಪ್ರದೇಶಗಳಲ್ಲಿ ಸೂಲಿಬೆಲೆ, ಜಡಿಗೇನಹಳ್ಳಿ, ನಂದಗುಡಿ ಹಾಗೂ ಅನುಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ವಿವಿಧ ತಳಿಗಳ ದಾಳಿಂಬೆ ಬೆಳೆ ಬೆಳೆಯುತ್ತಿದ್ದು, ಅನ್ಯ ರಾಜ್ಯಗಳಿಗೆ ರಫ್ತಾದರೆ ಕೆಜಿಗೆ 120-140 ರೂ.ಗೆ ಮಾರಾಟವಾಗುವುದು. ಇಂಥ ಸಂದರ್ಭದಲ್ಲಿ ತೋಟದ ಗಿಡಗಳಲ್ಲಿ ಹೂವು ಉದುರುವುದು, ಕಾಯಿಗೆ ಹುಳಬಿದ್ದಿರುವುದು, ಹಣ್ಣು ಕೊಳೆಯುವಂತಾಗಿದೆ.
ನಾಟಿ ತಳಿಗೂ ರೋಗ: ನಂದಗುಡಿ ಹೋಬಳಿಯ ದಳಸಗೆರೆ, ನೆಲವಾಗಿಲು, ಶಿವನಾಪುರ ಸೇರಿ ಇನ್ನಿತರ ಹಳ್ಳಿಗಳಲ್ಲಿ ವಾತಾವರಣಕ್ಕೆ ಅನುಕೂಲವಾದಂಥ ಭಾಗವಾನ್ ತಳಿ ನಾಟಿ ಮಾಡಿದ್ದಾರೆ. ದಾಳಿಂಬೆಯಲ್ಲಿ ಭಾಗವಾನ್, ಗಣೇಶ್, ಕೇಸರಿ ಮೂರು ಬಗೆಯ ತಳಿಗಳು ಇವೆ. ದಾಳಿಂಬೆಗೆ ಔಷಧ, ಕೊಟ್ಟಿಗೆ ಗೊಬ್ಬರ, ಕೂಲಿ, ನಿರ್ವಹಣಾ ವೆಚ್ಚ ಸೇರಿ ಪ್ರತಿ 1 ಎಕರೆಗೆ ಸುಮಾರು 5-6 ಲಕ್ಷ ರೂ. ವೆಚ್ಚವಾಗುತ್ತದೆ. ಉತ್ತಮ ಬೆಳೆಯಾದರೆ 5-6 ಟನ್ ಫಸಲು ನಿರೀಕ್ಷಿಸಬಹುದು. ಆದರೆ ದಾಳಿಂಬೆಗೆ ದುಂಡಾಣು, ಅಂಗಮಾರಿ ರೋಗ ಕಂಡುಬರುತ್ತಿದೆ. ಎಲೆ, ಹೂವು, ಕಾಯಿ ಕಟ್ಟುವ ವೇಳೆಯಲ್ಲಿ ಅಂಗಮಾರಿ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಅಗತ್ಯ ಔಷಧ ಸಿಂಪಡಿಸಿದರೂ ರೋಗ ತಹಬಂದಿಗೆ ಬರುತ್ತಿಲ್ಲ. ಹೀಗಾಗಿ ರೈತರಿಗೆ ನಿರೀಕ್ಷಿತ ಮಟ್ಟದ ಇಳುವರಿ ಸಿಗುವುದು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ.
ಮಾರುಕಟ್ಟೆ ವ್ಯವಸ್ಥೆ ಅಗತ್ಯ: ದಾಳಿಂಬೆ ಮಾರಾಟ ಮಾಡಲು ರೈತರಿಗೆ ಸಂಸ್ಕರಣಾ ಘಟಕಗಳಾಗಲಿ, ಮಾರಾಟ ಮಾಡುವ ವ್ಯವಸ್ಥೆ ಇಲ್ಲದೆ ಮಧ್ಯವರ್ತಿಗಳನ್ನು ಅವಲಂಬಿಸಬೇಕಿದೆ. ಹಾಪ್ ಕಾಮ್ಸ್ ಹಾಗೂ ಇತರ ಮಾರುಕಟ್ಟೆಗಳಲ್ಲೂ ಮಧ್ಯವರ್ತಿಗಳ ಹಾವಳಿಂದ ಬೆಳೆಗಾರ ನಲುಗುವಂತಾಗಿದೆ.
ಕಾರ್ಮಿಕರ ಕೊರತೆ:
ಬೆಳೆಗೆ ರೋಗ ಬಾಧೆ ಜತೆಗೆ ಸರ್ಕಾರದ ಉಚಿತ ಭಾಗ್ಯಗಳಿಂದಾಗಿ ಕೂಲಿ ಕಾರ್ಮಿಕರು ಸಿಗದಂತಾಗಿದ್ದು,ರೈತರು ನಿತ್ಯದ ಕೃಷಿ ಚಟುವಟಿಕೆಗಳಿಗೆ ಪರದಾಡುವಂತಾಗಿದೆ.
ವಿಮೆ ಸೌಲಭ್ಯ ಇಲ್ಲ: ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ದಾಳಿಂಬೆ ಬೆಳೆಯುವುದರಿಂದ ಈ ಬೆಳೆಗೆ ವಿಮಾ ಸೌಲಭ್ಯ ಇಲ್ಲವಾಗಿದೆ. ಹಾಗಾಗಿ ರೋಗ ತಗುಲಿ ನಷ್ಟವಾದರೆ ರೈತರಿಗೆ ನಷ್ಟ ಪ್ರಮಾಣ ಹೆಚ್ಚಾಗಲಿದೆ.
ಐದು ಎಕರೆಯಲ್ಲಿ ಭಾಗವಾನ್ ತಳಿಯ 2500 ಗಿಡ ನಾಟಿ ಮಾಡಿ 1 ವರ್ಷ 6 ತಿಂಗಳು ಆಗಿದೆ. ಕೆಲ ಗಿಡಗಳಲ್ಲಿ ಹೂವು ಮತ್ತು ಕಾಯಿಗಳಿಗೆ ರೋಗ ತಗುಲಿ ಉದುರುತ್ತಿವೆ. 5 ಎಕರೆ ಜಮೀನಿನಲ್ಲಿ 20-25 ಲಕ್ಷ ರೂ. ಬಂಡವಾಳ ಹಾಕಿದ್ದು, ಫಸಲು ಕೈಗೆ ಬರುವವರೆಗೆ ಗ್ಯಾರಂಟಿ ಇಲ್ಲ. ಇಷ್ಟೆಲ್ಲ ಬಂಡವಾಳ ಹೂಡಿದರೂ ಸರ್ಕಾರದಿಂದ ನಯಾಪೈಸೆ ಸೌಲಭ್ಯ ಸಿಕ್ಕಿಲ್ಲ.
ಚಂದ್ರಶೇಖರ್,ಬೆಳೆಗಾರ, ನೆಲವಾಗಿಲು.