ನಂದಗಡ ಸಂಪೂರ್ಣ ಅಭಿವೃದ್ಧಿಗೆ ಅನುದಾನ ನೀಡಿ

29bgv1-Web
ಖಾನಾಪುರ ತಾಲೂಕಿನ ನಂದಗಡ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಕೆ.ಎಚ್. ಈಶ್ವರಪ್ಪ ಅವರಿಗೆ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಮನವಿ ಸಲ್ಲಿಸಿದರು.
Published on

ಬೆಳಗಾವಿ: ರಾಯಣ್ಣ ಸಮಾಧಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಚ್.ಈಶ್ವರಪ್ಪ ಅವರನ್ನು ಭೇಟಿ ಮಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, ನಂದಗಡ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ 15 ಕೋಟಿ ರೂ.ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು, ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಮತ್ತು ಸಮಾಧಿ ಸ್ಥಳ ಅಭಿವೃದ್ಧಿಗಾಗಿ ಸುಮಾರು 110 ಕೋಟಿ ರೂ.ಮಂಜೂರು ಮಾಡಿದ್ದರು. ಆದರೆ, ಈ ಕಾಮಗಾರಿಯನ್ನು ಅರ್ಧದಲ್ಲೇ ತಡೆ ಹಿಡಿಯಲಾಗಿದೆ. ಕಾಮಗಾರಿಯನ್ನು ಶೀಘ್ರ ಮರು ಆರಂಭಿಸುವಂತೆ ಹಾಗೂ ಸಂಪೂರ್ಣ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದರು. ಬಹಳ ದಿನಗಳ ಬೇಡಿಕೆಯಾದ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆ ಮಾಡಬೇಕು. ಈ ಕಾಮಗಾರಿಯಿಂದ ಸುಮಾರು 25 ರಿಂದ 27 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿದಂತಾಗುತ್ತದೆ.

ಅಧಿವೇಶನದಲ್ಲಿಯೂ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಹಾಗಾಗಿ, ಸಚಿವರು ಮುತುವರ್ಜಿ ವಹಿಸಿ ಕಾಮಗಾರಿ ಆರಂಭಿಸಲು ಅನುಕೂಲ ಮಾಡಿಕೊಡಬೇಕು ಎಂದು ಶಾಸಕಿ ಡಾ.ಅಂಜಲಿ ಒತ್ತಾಯಿಸಿದರು. ಅದಕ್ಕೂ ಮೊದಲು ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಬಳಿ ಇರುವ ಮೂರ್ತಿಗೆ ಹೂಮಾಲೆ ಹಾಕಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಗೌರವ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net