ನಮೋ ನೇತೃತ್ವದಲ್ಲಿ ಭಾರತ ಅಭಿವೃದ್ಧಿ

11BGV_VISION KARNATAKA1
ನಗರದ ಜೆಎನ್‌ಎಂಸಿ ಆವರಣದ ಕೆಎಲ್‌ಇ ಸೆಂಟೆನರಿ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಪ್ರಾರಂಭವಾದ ಮೂರು ದಿನಗಳ ಕಾಲ ನಡೆಯಲಿರುವ ವಿಷನ್ ಕರ್ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಡಾ.ಪ್ರಭಾಕರ ಕೋರೆ, ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಅಭಯ ಪಾಟೀಲ, ಅರವಿಂದ ಬೆಲ್ಲದ, ಮಂಗಲ ಅಂಗಡಿ ಇತರರಿದ್ದರು.
Published on

ಬೆಳಗಾವಿ: ಹನ್ನೊಂದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ಕೇಂದ್ರದ ಯೋಜನೆಗಳಿಂದ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್‌ಇ ಸೆಂಟೆನರಿ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಪ್ರಾರಂಭವಾದ ಮೂರು ದಿನಗಳ ಕಾಲ ನಡೆಯಲಿರುವ ವಿಷನ್ ಕರ್ನಾಟಕ-2025 ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ, ಕೇಂದ್ರದ ವಿವಿಧ ಯೋಜನೆ, ಅವುಗಳ ಅನುಷ್ಠಾನದ ಕುರಿತು ಜನರಿಗೆ ಸಮಗ್ರ ಮಾಹಿತಿ ನೀಡಲು ಈ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಕೇಂದ್ರ ಸರ್ಕಾರದ 50ಕ್ಕೂ ಅಧಿಕ ಸಚಿವಾಲಯ, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಭಾಗಿಯಾಗಿವೆ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯೋಜನೆಗಳು ಜಾರಿಯಲ್ಲಿವೆ. ಮೇಕ್‌ಇನ್ ಇಂಡಿಯಾ ಸೇರಿದಂತೆ ಸಾಕಷ್ಟು ಕೇಂದ್ರದ ಯೋಜನೆಗಳು ಜನಪ್ರಿಯವಾಗಿವೆ. ಬೆಳಗಾವಿಯಲ್ಲಿ ಪ್ರದರ್ಶನ ನಡೆಯುತ್ತಿರುವ ಹೆಮ್ಮೆಯ ಸಂಗತಿ ಎಂದರು.

ಭಾರತ ಬಲಿಷ್ಠ ರಾಷ್ಟ್ರ: ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕನಸಿನ ವಿಕಸಿತ ಭಾರತಕ್ಕೆ ಹೆಜ್ಜೆ ಇಡುತ್ತಿದ್ದು, ದೇಶ ವಿಶ್ವದಲ್ಲಿಯೇ ಬಲಿಷ್ಠವಾಗುತ್ತಿದೆ. ಆರ್ಥಿಕ ಅಭಿವದ್ಧಿಯಲ್ಲಿ ದೇಶ 4ನೇ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಬಡತನ ಮಟ್ಟ ಕಡಿಮೆಯಾಗಿದೆ. ಉದ್ಯೋಗಾವಕಾಶ ಹೆಚ್ಚಾಗಿವೆ ಎಂದು ಕೇಂದ್ರ ಸರ್ಕಾರದ ಯೋಜನೆಗಳನ್ನು ಬಣ್ಣಿಸಿದರು.

ಬೆಳಗಾವಿ ಅಭಿವೃದ್ಧಿಗೆ ಒತ್ತು: ಪಾಕ್‌ಗೆ ನಡುಕ ಹುಟ್ಟಿಸಿದ ಬ್ರಹ್ಮೋಸ್‌ನಂತಹ ಅತ್ಯಾಧುನಿಕ ರಕ್ಷಣಾ ಯುದ್ಧ ವಿಮಾನಗಳು ದೇಶದಲ್ಲಿ ತಯಾರಾಗುತ್ತಿರುವುದು ಹೆಮ್ಮೆಯ ಸಂಗತಿ. ಮುಂಬರುವ ದಿನಗಳಲ್ಲಿ ಬೆಳಗಾವಿ ಅಭಿವದ್ಧಿಗೆ ಒತ್ತು ನೀಡುವೆ. ನಗರದಲ್ಲಿರುವ ರಕ್ಷಣಾ ಇಲಾಖೆ ಜಾಗ ಬಳಸಿಕೊಂಡು ಇಲ್ಲಿ ರಕ್ಷಣಾ ಇಲಾಖೆಯಿಂದ ಉತ್ಪಾದನೆ ಕೈಗಾರಿಕಾ ಘಟಕ ಸ್ಥಾಪಿಸುವಂತೆ ಕೇಂದ್ರ ರಕ್ಷಣಾ ಸಚಿವರನ್ನು ಒತ್ತಾಯಿಸಲಾಗುವುದು. ವಿಕಸಿತ ಭಾರತದಂತೆ ಬೆಳಗಾವಿ ನಗರವನ್ನು ಸುಂದರ ನಗರವನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದರು. ಇದೇ ವೇಳೆ ಪ್ರಯಾಸ್ ಎಕ್ಸಿಬಿಷನ್ಸ್ ಆ್ಯಂಡ್ ಪ್ರಮೋಷನ್ಸ್ ಸಂಸ್ಥೆ ಸಿಬ್ಬಂದಿ ಕೇಂದ್ರ ಸರ್ಕಾರದ ವಿವಿಧ ಯೋಜನೆ, ಬ್ಯಾಂಕ್‌ಗಳ ಮೂಲಕ ಲಭ್ಯವಿರುವ ಹಣಕಾಸು ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು. ಶಾಸಕ ಅರವಿಂದ ಬೆಲ್ಲದ, ಮಾಜಿ ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಎಂ.ಎಲ್.ಮುತ್ತೇನ್ನವರ, ಪಾಲಿಕೆ ಉಪ ಮಹಾಪೌರ ವಾಣಿ ಜೋಶಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ, ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ರಾಜಶೇಖರ ಡೋಣಿ, ಪ್ರಯಾಸ್ ಸಂಸ್ಥೆ ಮುಖ್ಯಸ್ಥ ವಿನೇಶ ಗುಪ್ತಾ, ನಿಧಿ ಅಗರವಾಲ್ ಇತರರಿದ್ದರು.

ಮೊದಲ ದಿನ 5 ಸಾವಿರ ವಿದ್ಯಾರ್ಥಿಗಳು ಭೇಟಿ

ಪ್ರದರ್ಶನದ ಮೊಲದ ದಿನವಾದ ಬುಧವಾರ 5 ಸಾವಿರ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಪ್ರದರ್ಶನದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ, ವಿಜ್ಞಾನ ಮತ್ತು ತಂತ್ರಜ್ಞಾನ, ಹೆಲ್ತ್‌ಕೇರ್, ಕೃಷಿ, ಇಲೆಕ್ಟ್ರಾನಿಕ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ, ರೈಲ್ವೆ, ಬ್ಯಾಂಕಿಂಗ್, ವಾಣಿಜ್ಯ ಮತ್ತು ವ್ಯಾಪಾರ, ವಸತಿ ಮತ್ತು ನಗರ ವ್ಯವಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಎಂಎಸ್‌ಎಂಇ, ಔಷಧ, ಹಡಗು ಮತ್ತು ಜಲಮಾರ್ಗ, ಜಲಸಂಪನ್ಮೂಲ, ಜವಳಿ ಮತ್ತೀತರ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ಯೋಜನೆಗಳ ಪ್ರದರ್ಶನ ನಗರದ ಜನರಿಗೆ , ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ನಗರದಲ್ಲಿ ಸಾಕಷ್ಟು ಅಭಿವದ್ಧಿ ಕಾರ್ಯ ನಡೆಯುತ್ತಿವೆ. ಕೈಗಾರಿಕಾ ಸ್ಥಾಪನೆಗೆ ಸಂಸದ ಶೆಟ್ಟರ್ ನೇತತ್ವದಲ್ಲಿ ಪ್ರಯತ್ನಿಸಲಾಗುವುದು. | ಅಭಯ ಪಾಟೀಲ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net